ನೆಲಸಮಗೊಂಡ ಬಾರಾಬಂಕಿ ಮಸೀದಿ ಮೋಸದಿಂದ ವಕ್ಫ್ ಆಸ್ತಿಯೆಂದು ನೋಂದಣಿ: ಎಂಟು ಜನರ ವಿರುದ್ಧ ಪ್ರಕರಣ

photo: twitter (@imMAK02)
ನೆಲಸಮಗೊಂಡ ಬಾರಾಬಂಕಿ ಮಸೀದಿ ಮೋಸದಿಂದ ವಕ್ಫ್ ಆಸ್ತಿಯೆಂದು ನೋಂದಣಿ: ಎಂಟು ಜನರ ವಿರುದ್ಧ ಪ್ರಕರಣ
ಹೊಸದಿಲ್ಲಿ,ಮೇ 21: ಸೋಮವಾರ ನೆಲಸಮಗೊಂಡಿದ್ದ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿನ ಗರೀಬ್ ನವಾಝ್ ಮಸೀದಿಯನ್ನು ‘ಮೋಸ ಮತ್ತು ವಂಚನೆ’ಯಿಂದ ವಕ್ಫ್ ಆಸ್ತಿಯೆಂದು ನೋಂದಾಯಿಸಿದ್ದ ಆರೋಪದಲ್ಲಿ ಸಮಿತಿಯ ಎಂಟು ಸದಸ್ಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಸೀದಿಯು ನೆಲಸಮಗೊಳ್ಳುವ ಮೊದಲಿನ ಎರಡು ತಿಂಗಳಲ್ಲಿ ಜಿಲ್ಲಾಡಳಿತದ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಿದ್ದ ಸುಮಾರು 180 ಜನರ ವಿರುದ್ಧ ಪ್ರಕರಣಗಳು ದಾಖಲಾಗಿದ್ದು,ಹಲವರನ್ನು ಬಂಧಿಸಲಾಗಿದೆ. ಓರ್ವನ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹೇರಲಾಗಿದೆ.
ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ, ನಾಲ್ವರು ಸದಸ್ಯರು ಮತ್ತು ಉ.ಪ್ರ.ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಯ ಇನ್ಸ್ ಪೆಕ್ಟರ್ ರನ್ನು ಎಫ್ ಐಆರ್ ನಲ್ಲಿ ಹೆಸರಿಸಲಾಗಿದೆ.
ಮಸೀದಿಯನ್ನು 2019ರಲ್ಲಿ ವಕ್ಫ್ ಮಂಡಳಿಯ ಆಸ್ತಿಯನ್ನಾಗಿ ಮೋಸದಿಂದ ನೋಂದಣಿ ಮಾಡಿಸಲಾಗಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ.
ಪೊಲೀಸರ ಕ್ರಮವು ಕಾನೂನುಬಾಹಿರವಾಗಿದೆ ಮತ್ತು ಮಸೀದಿಯನ್ನು ನೆಲಸಮಗೊಳಿಸಿದ ಮರುದಿನ ಅಲಹಾಬಾದ್ ಉಚ್ಚ ನ್ಯಾಯಾಲಯವು ಹೊರಡಿಸಿದ್ದ ನಿರ್ದೇಶದ ಉಲ್ಲಂಘನೆಯಾಗಿದೆ ಎಂದು ವಕ್ಫ್ ಮಂಡಳಿಯು ಹೇಳಿಕೆಯಲ್ಲಿ ಆರೋಪಿಸಿದೆ.





