ಉಡುಪಿ: ಕೋವಿಡ್‌ಗೆ ಏಳು ಬಲಿ; 855 ಮಂದಿಗೆ ಕೊರೋನ ಸೋಂಕು
ದಿನದಲ್ಲಿ 1223 ಮಂದಿ ಗುಣಮುಖ

ಉಡುಪಿ, ಮೇ 21: ಕೊರೋನ ಸೋಂಕಿಗೆ ಶುಕ್ರವಾರ ಜಿಲ್ಲೆಯಲ್ಲಿ ಮತ್ತೆ ಏಳು ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಈವರೆಗೆ ಮೃತರಾದ ವರ ಸಂಖ್ಯೆ 293ಕ್ಕೇರಿದೆ. 855 ಮಂದಿ ದಿನದಲ್ಲಿ ಸೋಂಕಿಗೆ ಪಾಸಿಟಿವ್ ಬಂದರೆ, 1223 ಮಂದಿ ಚಿಕಿತ್ಸೆಯ ಬಳಿಕ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 5960ಕ್ಕೆ ಇಳಿದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಶುಕ್ರವಾರ ಜಿಲ್ಲೆಯಲ್ಲಿ ಆರು ಮಂದಿ (60, 60, 60, 45, 70, 63) ಪುರುಷರು ಹಾಗೂ ಓರ್ವ ಮಹಿಳೆ (66) ಮೃತಪಟ್ಟಿದ್ದಾರೆ. ಇವರಲ್ಲಿ ಐವರು ಉಡುಪಿ ತಾಲೂಕಿನವರಾದರೆ ಇಬ್ಬರು ಕಾರ್ಕಳ ತಾಲೂಕಿನವರು. ಮೂವರು ಜಿಲ್ಲಾಸ್ಪತ್ರೆ, ಇಬ್ಬರು ಮಣಿಪಾಲದ ಖಾಸಗಿ ಆಸ್ಪತ್ರೆ ಹಾಗೂ ಇಬ್ಬರು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತರೆಲ್ಲರು ಮಲ್ಪೆ, ಶಿರ್ವ, ಶಿರ್ವ ದೂಪದಕಟ್ಟೆ, ಬೊಮ್ಮರಬೆಟ್ಟು, ಮುಂಡ್ಕೂರು, ಗಿಳಿಯಾರು ಹಾಗೂ ಮುಂಡ್ಕೂರಿನಂಥ ಗ್ರಾಮೀಣ ಭಾಗ ದಿಂದ ಬಂದವರು. ಗಂಭೀರ ಕೊರೋನ ಸೋಂಕಿನ ಲಕ್ಷಣದೊಂದಿಗೆ ಉಸಿರಾಟ ತೊಂದರೆ ಹಾಗೂ ನ್ಯುಮೋನಿಯದಿಂದ ನರಳುತಿದ್ದರು. ಮೂವರು ಅಂತಿಮ ಕ್ಷಣದಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದು ದಾಖಲಾದ ದಿನವೇ ಮೃತಪಟ್ಟಿದ್ದಾರೆ. ನಾಲ್ವರು ಶುಕ್ರವಾರ ಹಾಗೂ ಮೂವರು ಗುರುವಾರ ಮೃತಪಟ್ಟಿದ್ದರು.
ಶುಕ್ರವಾರ ಪಾಸಿಟಿವ್ ಬಂದ 855 ಮಂದಿಯಲ್ಲಿ 430 ಮಂದಿ ಪುರುಷ ರು ಹಾಗೂ 425 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 324, ಕುಂದಾಪುರ ತಾಲೂಕಿನ 380 ಹಾಗೂ ಕಾರ್ಕಳ ತಾಲೂಕಿನ 141 ಮಂದಿ ಇದ್ದು, ಉಳಿದ 10 ಮಂದಿ ಹೊರಜಿಲ್ಲೆಗಳಿಂದ ಉಡುಪಿಗೆ ವಿವಿಧ ಕಾರಣಗಳಿಗಾಗಿ ಆಗಮಿಸಿದವರು. ಇವರಲ್ಲಿ 15 ಮಂದಿ ಕೋವಿಡ್ ಆಸ್ಪತ್ರೆಗೆ 840 ಮಂದಿ ಹೋಮ್ ಐಸೋಲೇಷನ್‌ಗೆ ದಾಖಲಾಗಿದ್ದಾರೆ.
ಗುರುವಾರ 1223 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 44,650 ಕ್ಕೇರಿದೆ. ನಿನ್ನೆ ಜಿಲ್ಲೆಯ 2424 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 855 ಮಂದಿ ಸೇರಿ ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 50,903 ಆಗಿದೆ ಎಂದು ಡಾ.ಸೂಡ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,59,210 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.
5700 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 5,700 ಮಂದಿ ಕೋವಿಡ್‌ಗಿರುವ ಲಸಿಕೆಯನ್ನು ಪಡೆದಿದ್ದಾರೆ. ಇವರಲ್ಲಿ 1910 ಮಂದಿ ಮೊದಲ ಹಾಗೂ 3790 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಇವರಲ್ಲಿ 5361 ಮಂದಿ 45 ವರ್ಷ ಮೇಲಿನವರಾದರೆ, 166 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 173 ಮಂದಿ ಮುಂಚೂಣಿ ಕಾರ್ಯಕರ್ತರು ಸೇರಿದ್ದಾರೆ ಎಂದು ಡಾ.ಸೂಡ ತಿಳಿಸಿದರು.







