ಕೋವಿಡ್ ನಿಂದ ಮೃತರಾದವರ ಸಂಖ್ಯೆ ವರದಿಯಾಗಿದ್ದಕ್ಕಿಂತ ಮೂರು ಪಟ್ಟು ಅಧಿಕ: ವಿಶ್ವ ಆರೋಗ್ಯ ಸಂಸ್ಥೆ

ಜಿನೇವಾ,ಮೇ 21: ಜಗತ್ತಿನಾದ್ಯಂತ ಕೋವಿಡ್19 ಸೋಂಕಿನ ಕಾರಣದಿಂದಾಗಿ ನೇರವಾಗಿ ಅಥವಾ ಪರೋಕ್ಷವಾಗಿ ಸಾವನ್ನಪ್ಪಿದವರ ಸಂಖ್ಯೆಯು ಅಧಿಕೃತವಾಗಿ ತೋರಿಸಲಾಗುತ್ತಿರುವ ಸಾವಿನ ಪ್ರಕರಣಗಳು ಮೂರು ಪಟ್ಟು ಅತ್ಯಧಿಕವಾಗಿರುವ ಸಾಧ್ಯತೆಯಿದೆಯೆಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ತಿಳಿಸಿದೆ.
ಈವರೆಗೆ ಕೊರೋನ ಸೋಂಕಿನಿಂದಾಗಿ 60ರಿಂದ 80 ಲಕ್ಷ ಮಂದಿ ಸಾವನ್ನಪ್ಪಿರಬಹುದೆಂದು ಅದು ಅಂದಾಜಿಸಿದೆ.
2020ನೇ ಇಸವಿಯಲ್ಲಿ ಕೋವಿಡ್-19 ಸಾಂಕ್ರಾಮಿಕದ ಹಾವಳಿಯಿಂದಾಗಿ ಮೂವತ್ತು ಲಕ್ಷ ಮಂದಿ ಸಾವನ್ನಪ್ಪಿದ್ದು,, ಇದು ಅಧಿಕೃತವಾಗಿ ವರದಿಯಾದ ಸಾವಿನ ಸಂಖ್ಯೆಗಿಂತ 10.20 ಲಕ್ಷದಷ್ಟು ಅಧಿಕವೆಂದು ಡಬ್ಲುಎಚ್ಓ ಶುಕ್ರವಾರ ಬಿಡುಗಡೆಗೊಳಿಸಿರುವ ಜಾಗತಿಕ ಆರೋಗ್ಯ ಅಂಕಿಅಂಶಗಳ ವರದಿಯಲ್ಲಿ ತಿಳಿಸಿದೆ.
ನೇರವಾಗಿ ಅಥವಾ ಪರೋಕ್ಷವಾಗಿ ಕೋವಿಡ್19ನಿಂದಾಗಿ ಸಂಭವಿಸಿರುವ ಒಟ್ಟು ಸಾವುಗಳ ಸಂಖ್ಯೆಯನ್ನು ಗಣನೀಯ ಕಡಿಮೆ ಪ್ರಮಾಣದಲ್ಲಿ ಲೆಕ್ಕಹಾಕಲಾಗಿದೆ ಎಂದು ವರದಿ ತಿಳಿಸಿದೆ.
2021ರ ಮೇ 21ರೊಳಗೆ ವಿಶ್ವದಾದ್ಯಂತ 30.40 ಲಕ್ಷಕ್ಕೂ ಅಧಿಕ ಮಂದಿ ನೇರವಾಗಿ ಕೋವಿಡ್19 ಸೋಂಕಿನ ಕಾರಣದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ.
‘‘ಆದರೆ ಈ ಸಂಖ್ಯೆಯು ವರದಿಯಾದ ಸಂಖ್ಯೆಗಳಿಗಿಂತ ಮೂರು ಪಟ್ಟು ಅಧಿಕವಾಗಿದೆ. ಹೀಗಾಗಿ 60ರಿಂದ 80 ಲಕ್ಷದಷ್ಟು ಮಂದಿ ಸೋಂಕಿಗೆ ಬಲಿಯಾಗಿರಬಹುದು’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶ ಮತ್ತು ವಿಶ್ಲೇಷಣಾ ವಿಭಾಗದ ಸಹಾಯಕ ನಿರ್ದೇಶಕ ಸಮೀರಾ ಅಸ್ಮಾ ಅವರು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ವರದಿ ಮಂಡಿಸುತ್ತಾ ತಿಳಿಸಿದರು.
ಆಸ್ಪತ್ರೆಯಲ್ಲಿ ಸೌಕರ್ಯಗಳ ಕೊರತೆ ಹಾಗೂ ಮಾನವರ ಚಲನವಲನಕ್ಕೆ ನಿರ್ಬಂಧಗಳ ಕಾರಣದಿಂದಾಗಿ ಸಾವನ್ನಪ್ಪಿದಂತಹ ಅನೇಕ ಪ್ರಕರಣಗಳು ವರದಿಯಾಗದೆ ಹೋಗಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶ ವಿಶ್ಲೇಷಕ ವಿಲಿಯಂ ಮೆಸೆಬೂರಿ ತಿಳಿಸಿದ್ದಾರೆ.







