ಬ್ಲ್ಯಾಕ್ ಫಂಗಸ್‌ಗೆ ವೆನ್ಲಾಕ್‌ನಲ್ಲಿ ಚಿಕಿತ್ಸೆ: ಜಿಲ್ಲಾ ಆರೋಗ್ಯಾಧಿಕಾರಿ
ಮಂಗಳೂರು, ಮೇ 21: ದ.ಕ.ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಂದರೆ ಬ್ಲ್ಯಾಕ್ ಫಂಗಸ್ ಖಾಯಿಲೆಯನ್ನು ಕೆಪಿಎಂಇ ಕಾಯ್ದೆಯ ಕಲಂ 7ಬಿ ಅಡಿಯಲ್ಲಿ ಪರಿಗಣಿಸಲಾಗಿದೆ. ಇದಕ್ಕೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಖಾಯಿಲೆಯ ಬಗ್ಗೆ ಸಾರ್ವಜನಿಕರು ಭಯಪಡದೆ ಆರೋಗ್ಯದ ಬಗ್ಗೆ ನಿಗಾವಹಿಸಬೇಕು. ಗೃಹ ನಿಗಾವಣೆಯಲ್ಲಿರುವ ಹಾಗೂ ಗುಣಮುಖರಾದ ಕೋವಿಡ್ ಸೋಂಕಿತ ವ್ಯಕ್ತಿಗಳು ಮುಖದ ನೋವು/ಕೆನ್ನೆಯ ನೋವು, ರಕ್ತಸಿಕ್ತ ಮತ್ತು ದುರ್ವಾಸನೆ ಬೀರುವ ಮೂಗಿನ ಸ್ರಾವ, ಮೂಗಿನ ಬಿಗಿತ ಮತ್ತು ಕಣ್ಣಿನ ಲಕ್ಷಣಗಳು (ಕಣ್ಣುಗುಡ್ಡೆಯ ಎಡಿಮಾ, ಕಣ್ಣು ಕೆಂಪಾಗುವಿಕೆ, ದೃಷ್ಟಿ ದೋಷವುಂಟಾಗುವಿಕೆ) ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ಸಮೀಪದ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಬೇಕು ಎಂದು ಮನವಿ ಮಾಡಿದ್ದಾರೆ.
ಕೋವಿಡ್ ಆರೈಕೆಯನ್ನು ಪಡೆಯುತ್ತಿರುವ ಸೋಂಕಿತ ವ್ಯಕ್ತಿಗಳು ಡಯಾಬಿಟಿಸ್ ಮೆಲಿಟಸ್‌ನ್ನು ಕಡ್ಡಾಯವಾಗಿ ನಿಯಂತ್ರಣದಲ್ಲಿರಿಸಬೇಕು. ಮನೆಯಲ್ಲೇ ಆಮ್ಲಜನಕ ಚಿಕಿತ್ಸೆಯನ್ನು ಪಡೆಯುತ್ತಿರುವವರು ಹಾಗೂ ಆಮ್ಲಜನಕ ಸಾಂಧ್ರಕ (Oxygen Concentrator) ಗಳನ್ನು ಬಳಕೆ ಮಾಡುವವರು ಆರ್ದ್ರಕಕ್ಕೆ (humidifier) ಶುದ್ಧೀಕರಿಸಿದ ನೀರನ್ನು ಬಳಸಬೇಕು.
ಸಾರ್ವಜನಿಕರು ಯಾವುದೇ ರೋಗ ಭೀತಿಗೆ ಒಳಗಾಗದೆ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿ ಜಿಲ್ಲಾಡಳಿತವು ಕಾಲಕಾಲಕ್ಕೆ ನೀಡುವ ನಿರ್ದೇಶನಗಳನ್ನು ತಪ್ಪದೆ ಪಾಲಿಸಿಕೊಂಡು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಸರಕಾರೇತರ ಸಂಘ ಸಂಸ್ಥೆಗಳು/ ಸ್ವಯಂ ಸೇವಕ ಸಂಸ್ಥೆಗಳು ಯಾವುದೇ ವೈದ್ಯಕೀಯ ಕಿಟ್‌ಗಳಲ್ಲಿ ಪೂರೈಸುವ ಸಾಮಾಗ್ರಿಗಳ ವಿವರಗಳನ್ನು ಸಂಬಂಧಪಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗೆ ಸಲ್ಲಿಸಿ ಅನುಮತಿ ಹಾಗೂ ದೃಢೀಕರಣವನ್ನು ಕಡ್ಡಾಯವಾಗಿ ಪಡೆಯಬೇಕು. ವೈದ್ಯಕೀಯ ಕಿಟ್‌ಗಳಲ್ಲಿ ಯಾವುದೇ ಸ್ಟಿರಾಯ್ಡ್ (ಠಿಛ್ಟಿಟಜಿ) ಔಷಧಗಳನ್ನು ಸೇರಿಸುವಂತಿಲ್ಲ ಎಂದು ಆರೋಗ್ಯಾಧಿಕಾರಿಗಳು ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ 7 ಪ್ರಕರಣ ಪತ್ತೆ
ದ.ಕ.ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್‌ನ 7 ಪ್ರಕರಣಗಳು ಪತ್ತೆಯಾಗಿದ್ದು,ಆ ಪೈಕಿ ಒಬ್ಬರು ಮೃತಪಟ್ಟಿದ್ದಾರೆ. ಈ ಖಾಯಿಲೆಗೊಳಗಾದವರು ವೆನ್ಲಾಕ್ ಮತ್ತು ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ತಿಳಿಸಿದ್ದಾರೆ.







