ಉಡುಪಿ ಜಿಲ್ಲೆಯಾದ್ಯಂತೆ ಬಿಗಿ ಪೊಲೀಸ್ ತಪಾಸಣೆ: ಅನಗತ್ಯ ಸಂಚರಿಸಿದ 51 ವಾಹನಗಳು ಮುಟ್ಟುಗೋಲು

ಉಡುಪಿ, ಮೇ 21: ಜಿಲ್ಲೆಯಾದ್ಯಂತ ಹೆಚ್ಚುತ್ತಿರುವ ಕೊರೋನಾ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ಎಲ್ಲ ಕಡೆ ಬಿಗಿ ಪೊಲೀಸ್ ತಪಾಸಣೆ ಕಾರ್ಯ ನಡೆಸಲಾಗುತ್ತಿದ್ದು, ಅನಗತ್ಯವಾಗಿ ರಸ್ತೆಗೆ ಇಳಿದ ಒಟ್ಟು 51 ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಉಡುಪಿ ಪೊಲೀಸ್ ಉಪವಿಭಾಗ(ದ್ವಿಚಕ್ರ ವಾಹನ 13, ಕಾರು 5)ದಲ್ಲಿ 18, ಕಾರ್ಕಳ(ದ್ವಿಚಕ್ರ-5, ಕಾರು-2)ದಲ್ಲಿ 7, ಕುಂದಾ ಪುರ(ದ್ವಿಚಕ್ರ -24, ಕಾರು- 2)ದಲ್ಲಿ 26 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದೇ ರೀತಿ ಕೋವಿಡ್ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಉಡುಪಿಯಲ್ಲಿ 8 ಹಾಗೂ ಕಾರ್ಕಳದಲ್ಲಿ ನಾಲ್ಕು ಸೇರಿದಂತೆ ಒಟ್ಟು 12 ಪ್ರಕರಣ ದಾಖಲಾಗಿದೆ.
ಜಿಲ್ಲಾಧಿಕಾರಿ ಪರೀಶೀಲನೆ: ಬ್ರಹ್ಮಾವರದಲ್ಲಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ನಡೆಸುತ್ತಿದ್ದ ಅಟೋ ರಿಕ್ಷಾಗಳ ಬಗ್ಗೆ ಇಂದು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಅನಗತ್ಯವಾಗಿ ಓಡಾಟ ನಡೆಸುವ ರಿಕ್ಷಾಗಳನ್ನು ಮುಟ್ಟುಗೋಲು ಹಾಕುವಂತೆ ತಹಶೀಲ್ದಾರ್ ಸೇರಿದಂತೆ ಅಧಿಕಾರಿ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ತುರ್ತು ಆರೋಗ್ಯ ಮತ್ತು ನ್ಯಾಯಬೆಲೆ ಅಂಗಡಿಗಳ ಸಾಮಾನು ಸಾಗಾಟಕ್ಕೆ ಹೊರತು ಪಡಿಸಿ ಉಳಿದ ಯಾವುದೇ ಕಾರಣಕ್ಕೂ ರಿಕ್ಷಾ ಓಡಾಟ ನಡೆಸ ಬಾರದು ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ, ಪೊಲೀಸ್ ಅಧಿಕಾರಿಗಳು ಹಾಜರಿದ್ದರು.
ನಿಯಮಾವಳಿಯಲ್ಲಿ ಬದಲಾವಣೆ ಇಲ್ಲ: ಡಿಸಿ
ಉಡುಪಿ ಜಿಲ್ಲೆಯಲ್ಲಿ ಸದ್ಯ ಯಾವುದೇ ನಿಯಮಾವಳಿಯಲ್ಲಿ ಬದಲಾವಣೆ ಇಲ್ಲ. ಈಗ ಇರುವ ನಿಯಮಾವಳಿಗಳನ್ನು ಮುಂದುವರೆಸಲಾಗುವುದು ಎಂದು ಉಡುಪಿ ಜಿಲ್ಲಾದಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ದಿನಸಿ ಖರೀದಿಗೆ ಸದ್ಯ ಇರುವ ಸಮಯ ಸೂಕ್ತ ಆಗಿದ್ದು ಒಳ್ಳೆ ರೀತಿಯಲ್ಲಿ ಸುಗಮವಾಗಿ ವ್ಯವಹಾರ ನಡೆಯುತ್ತಿದೆ. ಎರಡು ಅಥವಾ ಮೂರು ದಿನ ಮಾತ್ರ ಖರೀದಿಗೆ ಅವಕಾಶ ನೀಡುವುದರಿಂದ ಮತ್ತೆ ಗೊಂದಲ ಉಂಟಾಗುತ್ತದೆ. ಸದ್ಯ ಇರುವ ನಿಯಮಾವಳಿಗಳನ್ನೇ ನಾವು ಮುಂದುವರೆ ಸುತ್ತೆವೆ. ಅದೇ ರೀತಿ ದಿನಸಿ ಮತ್ತು ಅಗತ್ಯ ಸಾಮಾಗ್ರಿಗಳನ್ನು ಮನೆಯ ಹತ್ತಿರದ ಅಂಗಡಿಯಿಂದ ಮಾತ್ರವೇ ಖರೀದಿಸಬೇಕು ಎಂದರು.
ಜಿಲ್ಲೆಯಲ್ಲಿ ಕೋವಿಡ್ ಎರಡನೆಯ ಅಲೆ ನಿಯಂತ್ರಣ ಕುರಿತು ಮುಖ್ಯ ಮಂತ್ರಿಗಳ ಸೂಚನೆಯಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳ ಲಾಗುವುದು. ಅನಗತ್ಯವಾಗಿ ಓಡಾಡುವ ವಾಹನಗಳನ್ನು ಸೀಜ್ ಮಾಡಿ ಪ್ರಕರಣ ದಾಖಲು ಮಾಡಲಾಗುವುದು. ಕೆಲವೊಂದು ಕಡೆಗಳಲ್ಲಿ ರಿಕ್ಷಾ ಗಳು ಅನಗತ್ಯ ಸಂಚಾರ ಮಾಡುವುದು ಕಂಡುಬರುತ್ತಿದೆ.
- ಜಿ.ಜಗದೀಶ್, ಜಿಲ್ಲಾಧಿಕಾರಿ ಉಡುಪಿ







