ಶಿವಮೊಗ್ಗದಲ್ಲಿ ವಾಹನಗಳ ಜಖಂ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ
ಬಂಧಿತರ ಮೇಲೆ ಗೂಂಡಾ ಕಾಯ್ದೆ

ಶಿವಮೊಗ್ಗ, ಮೇ 21: ನಗರದಲ್ಲಿ ಬುಧವಾರ ತಡರಾತ್ರಿ ಕಾರು ಸೇರಿದಂತೆ ವಿವಿಧ ವಾಹನಗಳನ್ನು ಜಖಂಗೊಳಿಸಿದ್ದ ಪ್ರಕರಣ ಸಂಬಂಧಪಟ್ಟಂತೆ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಸೂಳೇಬೈಲು ನಿವಾಸಿ ಮಹಮ್ಮದ್ ಸಲೀಂ (30), ಭರ್ಮಪ್ಪನಗರದ ಅಕ್ರಿ ಖಾನ್ (32) ಎಂಬುವವರನ್ನು ಶುಕ್ರವಾರ ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಘಟನೆ ನಡೆದ ದಿನವೇ ಬಂಧಿಸಲಾಗಿದೆ.
ಮಹಮ್ಮದ್ ಸಲೀಂ ಮತ್ತು ಅಕ್ರಿ ಖಾನ್ ಅವರು ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವ ಉದ್ದೇಶದಿಂದಲೇ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಈ ಹಿಂದೆ ಯಾವುದಾದರೂ ಅಪರಾಧ ಚಟುವಟಿಕೆಗಳಲ್ಲಿಭಾಗಿಯಾಗಿದ್ದರೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಉದ್ದೇಶ ಪೂರ್ವಕವಾಗಿಯೇ ಕೃತ್ಯ ಎಸಗಿರುವುದರಿಂದ ಆರೋಪಿಗಳ ಮೇಲೆ ಗೂಂಡಾ ಕಾಯಿದೆ ವಿಧಿಸಲಾಗಿದೆ.
ಘಟನೆ ಹಿನ್ನೆಲೆ: ಬುಧವಾರ ರಾತ್ರಿ ಎಚ್.ಸಿ.ಸಿದ್ದಯ್ಯ ರಸ್ತೆ, ಭರ್ಮಪ್ಪ ನಗರಗಳಲ್ಲಿ ಮನೆಗಳ ಮುಂದೆ ನಿಲ್ಲಿಸಿದ್ದ 12 ಕಾರು, 1 ಆಟೋ, 5 ದ್ವಿಚಕ್ರ ವಾಹನಗಳನ್ನು ರಾಡ್‌ನಿಂದ ಒಡೆದು ಜಖಂಗೊಳಿಸಿದ್ದರು. ಇದು ಸಿಸಿ ಕ್ಯಾಮೆರಾದಲ್ಲಿಯೂ ದಾಖಲಾಗಿತ್ತು. ಜತೆಗೆ, ಸ್ಥಳೀಯರು ಅದೇ ದಿನ ಶಾಹಿಲ್ ಖಾನ್, ಮನ್ಸೂರ್ ಅಹಮ್ಮದ್ ಎಂಬವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







