ಮಾಸ್ಕ್ ಪ್ರಕರಣ; ಸಂಭಾಷಣೆಯ ಆಡಿಯೋದಲ್ಲಿ ಹೆಸರು ಪ್ರಸ್ತಾಪದ ವಿರುದ್ಧ ದೂರು
ಮಂಗಳೂರು, ಮೇ 21: ಮಾಸ್ಕ್ ವಿವಾದದ ಬಗ್ಗೆ ಡಾ.ಶ್ರೀನಿವಾಸ ಕಕ್ಕಿಲ್ಲಾಯರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಟ್‌ನ ಮಾಲಕ ಮತ್ತು ಇನ್ನಿತರ ಇಬ್ಬರ ಮಧ್ಯೆ ನಡೆದ ಸಂಭಾಷಣೆಯ ಆಡಿಯೋದಲ್ಲಿ ತನ್ನ ಹೆಸರು ಪ್ರಸ್ತಾಪಿಸಿರುವುದರ ವಿರುದ್ಧ ವಿಚಾರವಾದಿ ನರೇಂದ್ರ ನಾಯಕ್ ಉರ್ವ ಠಾಣೆಗೆ ದೂರು ನೀಡಿದ್ದಾರೆ.
ಮಾಸ್ಕ್ ವಿವಾದದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ನಗರದ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ವಿರುದ್ಧ ಮಾರ್ಟ್ ಮಾಲಕರು ಕದ್ರಿ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಕರ್ನಾಟಕ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಈ ವಿಚಾರದಲ್ಲಿ ತನ್ನನ್ನು ದೂಷಿಸಿದ ಆಡಿಯೋ ತುಣುಕು ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಟ್‌ನ ಮಾಲಕ ಹಾಗೂ ಇನ್ನಿಬ್ಬರ ವಿರುದ್ಧ ನರೇಂದ್ರ ನಾಯಕ್ ಶುಕ್ರವಾರ ದೂರು ನೀಡಿದ್ದಾರೆ.
ಕದ್ರಿಯ ಸೂಪರ್ ಮಾರ್ಕೆಟ್ ಒಂದರಲ್ಲಿ ಇತ್ತೀಚೆಗೆ ನಡೆದ ಮಾಸ್ಕ್ ವಿವಾದದ ಘಟನೆಗೆ ಸಂಬಂಧಿಸಿ ಆಡಿಯೋವೊಂದರಲ್ಲಿ ಇಬ್ಬರು ಸಂಭಾಷಣೆ ನಡೆಸುತ್ತಿದ್ದಾರೆ. ಅದರಲ್ಲಿ ಡಾ.ಕಕ್ಕಿಲ್ಲಾಯ ಹಾಗೂ ನನ್ನ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದಕ್ಕೆ ಕಾರಣಕರ್ತರಾದ ಮಾರ್ಟ್ ಮಾಲಕ ಹಾಗೂ ಅವಹೇಳಕಾರಿಯಾಗಿ ಮಾತನಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನರೇಂದ್ರ ನಾಯಕ್ ದೂರಿನಲ್ಲಿ ತಿಳಿಸಿದ್ದಾರೆ.





