ಶಿವಮೊಗ್ಗ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿಗೆ ಮೊದಲ ಬಲಿ: 3 ಪ್ರಕರಣಗಳು ದೃಢ

ಸಾಂದರ್ಭಿಕ ಚಿತ್ರ
ಶಿವಮೊಗ್ಗ, ಮೇ 21: ಜಿಲ್ಲೆಯಲ್ಲಿ ಕೊರೋನ ಸೋಂಕಿನ ನಡುವೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು, ಇಂದು ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಮೆಗ್ಗಾನ್ನಲ್ಲಿ ಕೊರೋನ ಚಿಕಿತ್ಸೆಗೆಂದು ದಾಖಲಾದ ಸೋಂಕಿತರಲ್ಲಿ ಬ್ಲಾಕ್ ಫಂಗಸ್ ಕೂಡ ಕಾಣಿಸಿಕೊಳ್ಳುತ್ತಿದ್ದು, ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ.
ಕೊರೋನ ನೆಗೆಟಿವ್ ವರದಿ ಬರುವವರೆಗೆ ಬ್ಲ್ಯಾಕ್ ಫಂಗಸ್ಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಹೀಗಾಗಿ, ಮೊದಲು ಕೊರೋನ ಸೋಂಕು ಕಡಿಮೆ ಮಾಡುವುದಕ್ಕಾಗಿ ವೈದ್ಯರು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ, ವೈದ್ಯರು ಮತ್ತು ಜಿಲ್ಲಾಡಳಿತಕ್ಕೆ ಕೊರೋನ ನಡುವೆಯೇ ಹೊಸ ಸವಾಲು ಸೃಷ್ಟಿಯಾಗಿದೆ.
ಒಂದು ಸಾವು: ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ಗೆ ಶುಕ್ರವಾರ ಒಬ್ಬರು ಮೃತಪಟ್ಟಿದ್ದಾರೆ. 13 ಜನರಲ್ಲಿ ಬ್ಲ್ಯಾಕ್ ಫಂಗಸ್ ಲಕ್ಷಣಗಳಿದ್ದವು. ಅದರಲ್ಲಿ ಮೂರು ದೃಢಪಟ್ಟಿದ್ದು, ಇನ್ನೂ ಹತ್ತು ಜನರ ವರದಿ ಬರುವುದು ಬಾಕಿ ಇದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಕೊರೋನ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರು ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದರು. ಅದರಲ್ಲಿ ಹಲವು ಹೊರ ಜಿಲ್ಲೆಯ ಪ್ರಕರಣಗಳೂ ಇವೆ. ಆದರೆ, ಕೊರೋನ ಚಿಕಿತ್ಸೆ ನೀಡುತ್ತಿರುವಾಗಲೇ ಬ್ಲ್ಯಾಕ್ ಫಂಗಸ್ ಲಕ್ಷಣಗಳು ಗೋಚರಿಸಿವೆ. ತಕ್ಷಣ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರಲ್ಲಿ ಮೂರು ದೃಢಪಟ್ಟಿವೆ. ಈ ಮೂವರನ್ನು ಖಾಸಗಿ ಆಸ್ಪತ್ರೆಗೆ ರೆಫರ್ ಮಾಡುವುದಾಗಿ ಹೇಳಲಾಗಿದೆ ಎಂದು ತಿಳಿದುಬಂದಿದೆ.







