ಎಲ್ಎಸಿಯಲ್ಲಿ ಚೀನಾದಿಂದ ಗಡಿಗ್ರಾಮಗಳ ನಿರ್ಮಾಣ, ಮಿಲಿಟರಿ ಸೌಕರ್ಯಗಳ ಹೆಚ್ಚಳ

ಸಾಂದರ್ಭಿಕ ಚಿತ್ರ
ಬೀಜಿಂಗ್,ಮೇ 21: ಕ್ಸಿನ್ಜಿಯಾಂಗ್ನಿಂದ ಹಿಡಿದು ಅರುಣಾಚಲ ಪ್ರದೇಶದವರೆಗಿನ ಗಡಿನಿಯಂತ್ರಣ ರೇಖೆಯ ಸಮೀಪದಲ್ಲೇ ಗಡಿ ಗ್ರಾಮಗಳನ್ನು ನಿರ್ಮಿಸುವುದನ್ನು ಚೀನಾ ಮುಂದುವರಿಸುತ್ತಿದೆ.
ಭಾರತದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಎಲ್ಎಸಿ ಸನಿಹದಲ್ಲೇ ವಿಮಾನನಿಲ್ದಾಣದಂತಹ ಮೂಲಸೌಕರ್ಯಗಳನ್ನು ನಿಮಿಸುತ್ತಿದೆಯೆಂದು ಮೂಲಗಳು ತಿಳಿಸಿವೆ.
ಟಿಬೆಟ್ ನ 4 ಸಾವಿರ ಕಿ.ಮೀ. ಗಡಿಯುದ್ದಕ್ಕೂ ಸಾಧಾರಣ ಸಮೃದ್ಧಿಯ ಗ್ರಾಮಗಳನ್ನು ನಿರ್ಮಿಸಲು ಕಳೆದೊಂದು ದಶಕದಿಂದ ಚೀನಾವು ಹಣವನ್ನು ಸುರಿಯುತ್ತಿದೆಯ ಈ ಗ್ರಾಮಗಳಲ್ಲಿ ಹೆಚ್ಚಿನವು ಎಲ್ಎಸಿಗೆ ತಾಗಿಕೊಂಡೇ ಇರುವುದಾಗಿ ಟಿಬೆಟ್ ಸ್ವಾಯತ್ತ ಪ್ರಾಂತ (ಟಿಎಆರ್) ಕುರಿತು ಚೀನಾದ ರಾಜ್ಯ ಮಾಹಿತಿ ಮಂಡಳಿ ಕಚೇರಿ ಬಿಡುಗಡೆಗೊಳಿಸಿರುವ ನೂತನ ನೀತಿ ಪತ್ರದಿಂದ ತಿಳಿದುಬರುತ್ತದೆಯೆಂದು ಅವು ಹೇಳಿವೆ.
ಎಲ್ಎಸಿಯುದ್ದಕ್ಕೂ ಗಡಿ ಗ್ರಾಮಗಳನ್ನು ನಿರ್ಮಿಸುವ ತನ್ನ ಅಭಿಯಾನವನ್ನು ಚೀನಾವು ತ್ವರಿತಗೊಳಿಸಿರುವ ಬಗ್ಗೆ ಭಾರತೀಯ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ಲಭ್ಯವಾಗಿವೆ. ಕೊರೋನ ಹಾವಳಿಯ ಸಂದರ್ಭದಲ್ಲೂ ಈ ಗ್ರಾಮಗಳಲ್ಲಿ ರಸ್ತೆಗಳು ಹಾಗೂ ಮನೆಗಳನ್ನು ನಿರ್ಮಿಸುವ ಕ್ಷಿಪ್ರಗತಿಯಲ್ಲಿ ಪೂರ್ಣಗೊಂಡಿದೆ ಎಂದು ಮೂಲಗಳು ತಿಳಿಸಿವೆ.





