ಅಸ್ಸಾಂ ಅಸೆಂಬ್ಲಿಯಲ್ಲಿ ಅಖಿಲ್ ಗೊಗೋಯಿ ರಾಕ್ ಸ್ಟಾರ್ !
ಬಂಧಿತ ಶಾಸಕನ ಜೊತೆ ಸೆಲ್ಫಿ ಗೆ ಮುಗಿಬಿದ್ದ ಅಸೆಂಬ್ಲಿ ಸಿಬ್ಬಂದಿ

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚುನಾಯಿತರಾಗಿ ಅಸ್ಸಾಂ ವಿಧಾನಸಭೆಗೆ ಆಯ್ಕೆಯಾಗಿರುವ ಅಖಿಲ್ ಗೊಗೊಯಿ ನ್ಯಾಯಾಲಯಗಳ ವಿಶೇಷ ಅನುಮತಿಯೊಂದಿಗೆ ಜೈಲಿನಿಂದ ಪ್ರಮಾಣ ವಚನ ಸ್ವೀಕಾರಕ್ಕೆ ಆಗಮಿಸಿದ್ದು, ಅವರಿಗೆ ಹಾರ್ದಿಕ ಸ್ವಾಗತ ವ್ಯಕ್ತವಾಯಿತು. ವಿಧಾನಸಭೆಯ ಸಿಬ್ಬಂದಿ ಸೇರಿದಂತೆ ಹಲವಾರು ಮಂದಿ ಗೊಗೊಯ್ ರೊಂದಿಗೆ ಸೆಲ್ಫಿ ಪಡೆದುಕೊಳ್ಳಲು ಮುಗಿಬಿದ್ದರು.
ಸ್ವಂತ್ರರಾಗಿ ಸ್ಫರ್ಧಿಸಿದ್ದ ಅಖಿಲ್ ಗೊಗೊಯಿ ಯಾವುದೇ ಪ್ರಚಾರಗಳಿಲ್ಲದೇ ಜೈಲಿನ ಕಂಬಿಗಳ ಹಿಂದಿನಿಂದಲೇ ಚುನಾವಣೆ ಗೆದ್ದ ಮೊದಲ ಅಸ್ಸಾಮಿಯಾದರು. ಖೈದಿಯಾಗಿದ್ದುಕೊಂಡೇ ಶಾಸಕರಾದ ಮೊದಲ ವ್ಯಕ್ತಿ ಎನಿಸಿಕೊಂಡರು. ಪೌರತ್ವ ಕಾಯ್ದೆ ತಿದ್ದುಪಡಿ ಕುರಿತಾದಂತೆ ಆಂದೋಲನವನ್ನು ಮುನ್ನಡೆಸಿದ ಆರೋಪದಲ್ಲಿ ಭಯೋತ್ಪಾದನೆ ಹಾಗೂ ದೇಶದ್ರೋಹ ಪ್ರಕರಣಗಳ ಅಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು.
ರಾಕ್ ಸ್ಟಾರ್ ಗಳ ಕೋಣೆಯ ಹೊರಗಡೆ ಅಭಿಮಾನಿಗಳು ನಿಂತಿರುವಂತೆ ಅವರನ್ನು ನೋಡಲು ಹಲವಾರು ಮಂದಿ ಕಿಕ್ಕಿರಿದು ನಿಂತಿದ್ದರು ಮತ್ತು ವಿಧಾನಸಭೆಯ ಸಿಬ್ಬಂದಿ ಸೇರಿದಂತೆ ಹಲವು ಅವರೊಂದಿಗೆ ಸೆಲ್ಫಿಗಾಗಿ ಮುಗಿಬಿದ್ದರು ಎಂದು deccanherald ವರದಿ ತಿಳಿಸಿದೆ.
"ನಾವು ಅಸ್ಸಾಂ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಅಕೀಲ್ ರನ್ನು ನೋಡಲು ಅವರನ್ನಿರಿಸಲಾದ ಕೋಣೆಯ ಬಳಿಯಿದ್ದೇವೆ. ನಾನು ಇಲ್ಲಿ ಸುಮಾರು 15 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆದರೆ ಇದುವರೆಗೂ ಯಾರೊಂದಿಗೂ ಫೋಟೊ ಕ್ಲಿಕ್ಕಿಸಿಲ್ಲ. ಆದರೆ ಅಖಿಲ್ ರನ್ನು ನೋಡಲು ಉತ್ಸುಕಳಾಗಿದ್ದೇನೆ" ಎಂದು ಸಿಬ್ಬಂದಿಯೋರ್ವರು ಹೇಳಿಕೆ ನೀಡಿದ್ದಾರೆ.
ಗೊಗೊಯ್ ದೇವರ ಹೆಸರಿಗೆ ಬದಲಾಗಿ ಪ್ರಾಮಾಣಿಕತೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.







