ಮಾತುಕತೆ ಪುನರಾರಂಭಕ್ಕೆ ಪ್ರಧಾನಮಂತ್ರಿಗೆ ಪತ್ರ ಬರೆದ ರೈತ ಸಂಘಟನೆಗಳು
ಮೇ 26ರಂದು ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆ

ಹೊಸದಿಲ್ಲಿ: ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧದ ಆಂದೋಲನವನ್ನು ಮುನ್ನಡೆಸುತ್ತಿರುವ ರೈತ ಸಂಘಟನೆಗಳ ಜಂಟಿ ವೇದಿಕೆ ಸಂಯುಕ್ತಾ ಕಿಸಾನ್ ಮೋರ್ಚಾ (ಎಸ್‌ಕೆಎಂ) ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ರೈತರೊಂದಿಗೆ ಮಾತುಕತೆ ಪುನರಾರಂಭಿಸಲು ತಾವು ಮಧ್ಯಪ್ರವೇಶಿಸಬೇಕು. ಮೂರು ಕೃಷಿ ಕಾನೂನುಗಳ ರದ್ಧತಿ ಹಾಗೂ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನು ಖಾತ್ರಿ ನೀಡುವುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ.
ಸಿಂಘು ಗಡಿಯಲ್ಲಿರುವ ತಮ್ಮ ಪ್ರತಿಭಟನಾ ಸ್ಥಳದಲ್ಲಿ ಕೋವಿಡ್ 19 ರ ಕಾರಣದಿಂದಾಗಿ ರೈತರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ಸಾಂಕ್ರಾಮಿಕ ಸಮಯದಲ್ಲಿ ಆರೋಗ್ಯದ ಅಪಾಯಗಳಿಗೆ ಯಾರನ್ನೂ ಒಡ್ಡಲು ಪ್ರತಿಭಟನಾಕಾರರು ಬಯಸದಿದ್ದರೂ, ಅವರು ಹೋರಾಟವನ್ನು ಕೈಬಿಡುವುದಿಲ್ಲ ಎಂದು ಎಸ್‌ಕೆಎಂ ಒತ್ತಿಹೇಳಿದೆ.
ಎಸ್‌ಕೆಎಂನ ಒಂಬತ್ತು ರೈತ ಮುಖಂಡರು ಪ್ರಧಾನಮಂತ್ರಿಗೆ ಬರೆದ ಜಂಟಿ ಪತ್ರದಲ್ಲಿ ಮೇ 25 ರೊಳಗೆ ಸರ್ಕಾರದಿಂದ ರಚನಾತ್ಮಕ ಹಾಗೂ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸದಿದ್ದರೆ, ಮುಂದಿನ ಹಂತದಲ್ಲಿ ರಾಷ್ಟ್ರೀಯ ಪ್ರತಿಭಟನಾ ದಿನ ಮೇ 26 ರಂದು ತಮ್ಮ ಹೋರಾಟವನ್ನುಮತ್ತಷ್ಟು ತೀವ್ರಗೊಳಿಸುವುದಾಗಿ ಹೇಳಿದರು. ದಿಲ್ಲಿ ಗಡಿಯಲ್ಲಿ ರೈತರ ಪ್ರತಿಭಟನೆಗೆ ಮೇ 26 ರಂದು ಆರು ತಿಂಗಳು ಪೂರ್ಣಗೊಳ್ಳುತ್ತದೆ . ಎಸ್‌ಕೆಎಂ ಈ ದಿನವನ್ನು 'ಕಪ್ಪು ಧ್ವಜ ದಿನ' ವನ್ನಾಗಿ ಆಚರಿಸಲು ನಿರ್ಧರಿಸಿದೆ.