ಉತ್ತರಪ್ರದೇಶ: ದೇಶದಲ್ಲೇ ಮೊದಲ ಬಿಳಿ ಶಿಲೀಂಧ್ರ ಸೋಂಕು ಪತ್ತೆ

ಹೊಸದಿಲ್ಲಿ, ಮೇ 23: ಉತ್ತರಪ್ರದೇಶದ ಮಾಹುನಲ್ಲಿ ಈ ಹಿಂದೆ ಕೊರೋನ ಸೋಂಕಿಗೆ ಚಿಕಿತ್ಸೆ ಪಡೆದುಕೊಂಡಿದ್ದ 70 ವರ್ಷದ ವೃದ್ಧರೋರ್ವರಲ್ಲಿ ಬಿಳಿ ಶಿಲೀಂಧ್ರ ಸೋಂಕು ಪತ್ತೆಯಾಗಿದೆ. ಕೊರೋನ ಸೋಂಕಿನಿಂದ ಗುಣಮುಖರಾದ ರೋಗಿಯಲ್ಲಿ ಬಿಳಿ ಶಿಲೀಂಧ್ರ ಸೋಂಕು ಕಾಣಿಸಿಕೊಂಡಿರುವ ಪ್ರಕರಣ ಭಾರತದಲ್ಲೇ ಬಹುಶಃ ಇದು ಮೊದಲನೆಯದಾಗಿದೆ.
ಕೊರೋನ ಸೋಂಕಿತ 70 ವರ್ಷದ ಈ ವ್ಯಕ್ತಿ ದಿಲ್ಲಿಯ ಆಸ್ಪತ್ರೆಯೊಂದರಲ್ಲಿ ಎಪ್ರಿಲ್ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅನಂತರ ಗುಣಮುಖರಾದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ವ್ಯಕ್ತಿ ಕೊರೋನ ಚಿಕಿತ್ಸೆಯ ಬಳಿಕ ಸ್ಟಿರಾಯ್ಡ್ ಚಿಕಿತ್ಸೆಗೆ ಒಳಗಾಗುತ್ತಿದ್ದರು. ಕೆಲವು ಸಮಯದ ಬಳಿಕ ಅವರ ಕಣ್ಣಿನ ಒಳಗೆ ಬಿಳಿ ಬಣ್ಣದ ಪದಾರ್ಥ ಅಭಿವೃದ್ಧಿಯಾಗಿತ್ತು ಹಾಗೂ ದೃಷ್ಟಿ ನಾಶವಾಗಿತ್ತು. ಅವರು ನನ್ನ ಬಳಿ ಬಂದಾಗ ಕಣ್ಣಿನಲ್ಲಿ ರಕ್ತದ ಮೂಲಕ ಈ ಸೋಂಕು ಹರಡಿತ್ತು ಎಂದು ನೇತ್ರ (ವಿಟ್ರಿಟೊ-ರೆಟನಾ) ತಜ್ಞ ಡಾ. ಕ್ಷಿತಿಜ್ ಆದಿತ್ಯ ಹೇಳಿದ್ದಾರೆ.
ಬಯಾಪ್ಸಿ ಮೂಲಕ ಇದು ಬಿಳಿ ಶಿಲೀಂಧ್ರದ ಸೋಂಕು ಎಂಬುದನ್ನು ದೃಢಪಡಿಸಲಾಯಿತು. ಉತ್ತರಪ್ರದೇಶದ ಮಾಹು ನಿವಾಸಿಯಾದ ಇವರಿಗೆ ದೃಷ್ಟಿ ಮಂದವಾಗಿರುವುದು ಅನುಭವಕ್ಕೆ ಬಂದಿತ್ತು. ಅಲ್ಲದೆ, ಅವರ ಕಣ್ಣಿನ ಒಳಗೆ ಬಿಳಿ ಪದಾರ್ಥ ಕಂಡು ಬಂದಿತ್ತು. ಇತ್ತೀಚೆಗೆ ಕೊರೋನ ಚಿಕಿತ್ಸೆಗೆ ಒಳಗಾದವರು ಮುಖ್ಯವಾಗಿ ಸ್ಟೀರಾಯ್ಡೆ ತೆಗೆದುಕೊಂಡವರು ಹಾಗೂ ಸಕ್ಕರೆ ಕಾಯಿಲೆ ಇರುವವರಲ್ಲಿ ಇಂತಹ ರೋಗ ಲಕ್ಷಣಗಳು ಕಂಡು ಬಂದರೆ ಕೂಡಲೇ ನೇತ್ರ ತಜ್ಞರ (ರೆಟಿನಾ ತಜ್ಞ)ರನ್ನು ಭೇಟಿಯಾಗಿ ಎಂದು ಡಾ. ಕ್ಷಿತಿಜ್ ಆದಿತ್ಯ ಅವರು ತಿಳಿಸಿದ್ದಾರೆ.
ಸಕ್ಕರೆ ಕಾಯಿಲೆ ಇರುವ ರೋಗಿಗಳಲ್ಲಿ ಹಾಗೂ ಕೊರೋನ ಚಿಕಿತ್ಸೆಗಾಗಿ ದೀರ್ಘ ಕಾಲದಿಂದ ಸ್ಟಿರಾಯ್ಡ್ ಗಳನ್ನು ತೆಗೆದುಕೊಳ್ಳುವವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಆದುದರಿಂದ ಬಿಳಿ ಶೀಲೀಂಧ್ರದ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಬಿಳಿ ಶಿಲೀಂಧ್ರ ಸೋಂಕು ಕಣ್ಣು, ಶ್ವಾಸಕೋಶ, ಮೆದುಳು, ಉಗುರು, ಚರ್ಮ, ಗುಪ್ತಾಂಗ ಹಾಗೂ ಮೂತ್ರಪಿಂಡಗಳಿಗೆ ಸುಲಭವಾಗಿ ಹರಡುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ