ಲಾಕ್ಡೌನ್ ಉಲ್ಲಂಘಿಸಿ ಹುಟ್ಟುಹಬ್ಬ ದಿನಾಚರಣೆ: ಗನ್ ಝಳಪಿಸಿ ಸಂಭ್ರಮಿಸಿದ ತಂಡದ ವಿರುದ್ಧ ಪ್ರಕರಣ ದಾಖಲು
ಭೋಪಾಲ, ಮೇ 21: ಸುಮಾರು 400 ಜನರಿದ್ದ ತಂಡವೊಂದು ಲಾಕ್ಡೌನ್ ನಿಯಮವನ್ನು ಉಲ್ಲಂಘಿಸಿ ಮನೆಯ ಟೆರೇಸ್ ಮೇಲೆ ಹುಟ್ಟುಹಬ್ಬ ಆಚರಿಸಿದ್ದಲ್ಲದೆ, ಗನ್ ಝಳಪಿಸಿ ಡಕಾಯಿತ ರಾಮ್ ಬಾಬು ಗದಾರಿಯಾನನ್ನು ಹೊಗಳುವ ಘೋಷಣೆ ಮೊಳಗಿಸಿದ ಪ್ರಕರಣ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ವರದಿಯಾಗಿದೆ.
ಡಕಾಯಿತ ರಾಮ್ ಬಾಬು ಗದಾರಿಯಾ 2007ರಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದ. ಈತನ ಅನುಚರರು ಈ ಬರ್ತ್ಡೇ ಪಾರ್ಟಿ ಆಯೋಜಿಸಿದ್ದರು ಎಂದು ಹೇಳಲಾಗಿದೆ. ಭಿಂಡ್ನ ಗೋಮ್ರಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಇದರ ವೀಡಿಯೋ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಬರ್ತ್ಡೇ ಪಾರ್ಟಿ ಆಯೋಜಿಸಿದ್ದವರು ಹಾಗೂ ಪಾರ್ಟಿಗೆ ಅತಿಥಿಗಳಾಗಿ ಆಗಮಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಲಾಕ್ಡೌನ್ ನಿಯಮ ಉಲ್ಲಂಘಿಸಿ ಗುಂಪುಗೂಡಿದವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ. ಇದೇ ಜಿಲ್ಲೆಯಲ್ಲಿ ಗುರುವಾರ ವಿವಾಹ ಸಮಾರಂಭದಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅತಿಥಿಗಳಿಗೆ ಕಪ್ಪೆ ಜಿಗಿತ ಶಿಕ್ಷೆ ನೀಡಿರುವ ವೀಡಿಯೊ ಕೂಡಾ ವೈರಲ್ ಆಗಿತ್ತು. ಮಧ್ಯಪ್ರದೇಶದಲ್ಲಿ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಮೇ 31ರವರೆಗೆ ಕರ್ಫ್ಯೂ ವಿಧಿಸಲಾಗಿದೆ.