ತೌಕ್ತೆ ಚಂಡಮಾರುತ: ಮಹಾರಾಷ್ಟ್ರದಲ್ಲಿ 19 ಮಂದಿ ಸಾವು
ಮುಂಬೈ, ಮೇ 23: ತೌಕ್ತೆ ಚಂಡಮಾರುತಕ್ಕೆ ಸಂಬಂಧಿಸಿದ ದುರಂತ ಘಟನೆಗಳಲ್ಲಿ ಮಹಾರಾಷ್ಟ್ರದಲ್ಲಿ ಒಟ್ಟು 19 ಮಂದಿ ಮೃತಪಟ್ಟಿದ್ದಾರೆ ಹಾಗೂ 37 ಮಂದಿ ಗಾಯಗೊಂಡಿದ್ದಾರೆ. ಚೌಕ್ತೆ ಚಂಡಮಾರುತದಿಂದ 7 ಜಿಲ್ಲೆಗಳಲ್ಲಿ ಸಾವು ಸಂಭವಿಸಿದೆ ಹಾಗೂ ಅಪಾರ ಆಸ್ತಿಪಾಸ್ತಿಗೆ ಹಾನಿ ಉಂಟಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಗುರುವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ತೌಕ್ತೆ ಚಂಡಮಾರುತ ದೇಶದ ಪಶ್ಚಿಮ ಕರಾವಳಿಯ ಮೂಲಕ ಹಾದು ಹೋದ ಬಳಿಕ ಸೋಮವಾರ ಗುಜರಾತ್ ಕರಾವಳಿಗೆ ಅಪ್ಪಳಿಸಿತ್ತು. ಇದರಿಂದ ಮಹಾರಾಷ್ಟದ 10 ಜಿಲ್ಲೆಗಳ ಮೇಲೆ ಪರಿಣಾಮ ಉಂಟಾಗಿತ್ತು. ಕರಾವಳಿಯ ರತ್ನಗಿರಿ ಜಿಲ್ಲೆಯಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಉತ್ತರ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ಮರಗಳು ಧರೆಗುರುಳಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ರಾಯಗಢ ಹಾಗೂ ಸಿಂಧುದುರ್ಗಾ ಜಿಲ್ಲೆಗಳಲ್ಲಿ ತಲಾ ನಾಲ್ಕು ಸಾವುಗಳು ವರದಿಯಾಗಿವೆ. ಥಾಣೆ ಹಾಗೂ ಪಾಲ್ಗಾರ್ನಲ್ಲಿ ತಲಾ 3 ಸಾವು ವರದಿಯಾಗಿವೆ.
ಮುಂಬೈಯಲ್ಲಿ ಓರ್ವರು ಸಾವನ್ನಪ್ಪಿದ್ದಾರೆ. ಇತರ ಪ್ರಕರಣಗಳಲ್ಲಿ ಸಾವಿನ ಕಾರಣ ದೃಢಪಟ್ಟಿಲ್ಲ. ಇದೆಲ್ಲವೂ ಸಂಭವಿಸಿರುವುದು ಕರಾವಳಿ ಜಿಲ್ಲೆಗಳಲ್ಲಿ. ಚಂಡಮಾರುತದಿಂದ ಮಹಾರಾಷ್ಟ್ರದಲ್ಲಿ 11 ಜಾನುವಾರುಗಳು ಕೂಡ ಸಾವನ್ನಪ್ಪಿವೆ. 81ಕ್ಕೂ ಅಧಿಕ ಕಟ್ಟಡಗಳಿಗೆ ಹಾನಿ ಉಂಟಾಗಿವೆ. 13,021 ಕಟ್ಟಡಗಳಿಗೆ ಭಾಗಶಃ ಹಾನಿಗೀಡಾಗಿದೆ.
ಒಟ್ಟು 13,425 ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ರಾಜ್ಯದಲ್ಲಿ ರಾಯಗಢ ಹಾಗೂ ದಕ್ಷಿಣ ಮುಂಬೈ ಚಂಡಮಾರುತದಿಂದ ತೀವ್ರವಾಗಿ ಪೀಡಿತವಾದ ಜಿಲ್ಲೆಗಳಾಗಿವೆ. ಜಿಲ್ಲೆಯಲ್ಲಿ ಭಾಗಶಃ ಹಾನಿಗೀಡಾದ 6,092 ಕಟ್ಟಡಗಳಿಂದ 8,400ಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ. ಗೋವಾದ ಗಡಿಯಾಗಿರುವ ಸಿಂಧುದುರ್ಗದಲ್ಲಿ 53 ಕಟ್ಟಡಗಳು ಸಂಪೂರ್ಣ ಹಾನಿಗೀಡಾಗಿವೆ ಎಂದು ಹೇಳಿಕೆ ತಿಳಿಸಿದೆ.







