ಬಾರ್ಜ್ ದುರಂತ: ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ ಅಫ್ಕಾನ್ ಕಂಪೆನಿಯಿಂದ 35ರಿಂದ 75 ಲಕ್ಷ ರೂ. ಪರಿಹಾರ
ಹೊಸದಿಲ್ಲಿ, ಮೇ 21: ಈ ವಾರ ಚಂಡಮಾರುತದಿಂದ ಅರೆಬಿ ಸಮುದ್ರದಲ್ಲಿ ಅಫ್ಕಾನ್ ಇನ್ಫ್ರಾಸ್ಟ್ರಕ್ಚರ್ ಗೆ ಸೇರಿದ ಬಾರ್ಜ್ ಪಿ305 ಮುಳುಗಿ ಕನಿಷ್ಠ 51 ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಅಫ್ಕಾನ್ ಇನ್ಫ್ರಾಸ್ಟ್ರಕ್ಟರ್ ದುರಂತದಲ್ಲಿ ಮೃತಪಟ್ಟ ಕುಟುಂಬದ ಸದಸ್ಯರಿಗೆ 35ರಿಂದ 75 ಲಕ್ಷದ ವರೆಗೆ ಪರಿಹಾರ ನೀಡಲಾಗುವುದು ಎಂದು ಶುಕ್ರವಾರ ಹೇಳಿದೆ. ತೌಕ್ತೆ ಚಂಡಮಾರುತದ ಪ್ರಭಾವದಿಂದ ಬಾಂಬೆ ಹೈಯ ಒಎನ್ಜಿಸಿ ತೈಲ ಬಾವಿಗಳ ಸಮೀಪ ಅರೆಬಿ ಸಮುದ್ರದಲ್ಲಿ ಬಾರ್ಜ್ ಪಿ305 ಸೋಮವಾರ ಮುಳುಗಿತ್ತು. ಈ ಬಾರ್ಜ್ನಲ್ಲಿ 261 ಮಂದಿ ಸಿಬ್ಬಂದಿ ಇದ್ದರು. ಇವರಲ್ಲಿ 51 ಮಂದಿ ಮೃತಪಟ್ಟಿದ್ದಾರೆ. 24 ಮಂದಿ ಇದುವರೆಗೆ ಪತ್ತೆಯಾಗಿಲ್ಲ.
ಈ ದುರಂತದಲ್ಲಿ ಸಾವನ್ನಪ್ಪಿದ ಉದ್ಯೋಗಿಗಳ ಪ್ರತಿ ಕುಟುಂಬಕ್ಕೆ ಅವರ ಬಾಕಿ ಉಳಿದಿರುವ ಸೇವಾವಧಿ 10 ವರ್ಷದ ವರೆಗಿನ ವೇತನವನ್ನು ಪರಿಹಾರ ಹಾಗೂ ವಿಮೆಯ ಮೂಲಕ ನಾವು ನೀಡಲಿದ್ದೇವೆ ಎಂದು ಅಫ್ಕಾನ್ ಇನ್ಫ್ರಾಸ್ಟ್ರಕ್ಚರ್ ಹೇಳಿದೆ. ಇದರಿಂದ ಪ್ರತಿ ಕುಟುಂಬಕ್ಕೆ ಕನಿಷ್ಠ 35 ಲಕ್ಷದಿಂದ ಗರಿಷ್ಠ 75 ಲಕ್ಷ ರೂಪಾಯಿ ವರೆಗೆ ದೊರೆಯಲಿದೆ. ಪಾವತಿ ವಿಧಾನಗಳ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಅಫ್ಕಾನ್ಸ್ನ ವಕ್ತಾರ ತಿಳಿಸಿದ್ದಾರೆ. ದುರಂತದಲ್ಲಿ ಮೃತಪಟ್ಟ ಸಿಬ್ಬಂದಿಗಳ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನದ ಮೂಲಕ ಬೆಂಬಲ ನೀಡಲು ಟ್ರಸ್ಟ್ ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.