ಕರ್ಫ್ಯೂ ಉಲ್ಲಂಘನೆ ಆರೋಪ : ಪೊಲೀಸ್ ಥಳಿತದಿಂದ ಬಾಲಕ ಮೃತ್ಯು

ಉನ್ನಾವೋ : ಕೊರೋನ ಕರ್ಫ್ಯೂ ಉಲ್ಲಂಘಿಸಿದ ಆರೋಪದಲ್ಲಿ ಪೊಲೀಸರಿಂದ ತೀವ್ರ ಥಳಿತಕ್ಕೊಳಗಾದ ಹದಿನೇಳು ವರ್ಷದ ಬಾಲಕ ಮೃತಪಟ್ಟಿರುವ ಧಾರುಣ ಘಟನೆ ವರದಿಯಾಗಿದೆ.
ಪೊಲೀಸರಿಂದ ತೀವ್ರ ಥಳಿತಕ್ಕೆ ಒಳಗಾದ ಬಾಲಕ ಶುಕ್ರವಾರ ಮೃತಪಟ್ಟಿದ್ದಾನೆ ಎಂದು ಕುಟುಂಬದವರು ಹೇಳಿದ್ದು, ಆರೋಪದ ಹಿನ್ನೆಲೆಯಲ್ಲಿ ಓರ್ವ ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದೆ ಹಾಗೂ ಇನ್ನೊಬ್ಬ ಗೃಹರಕ್ಷಕದ ಜವಾನನನ್ನು ವಜಾ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಗಾರಮಾವು ಪಟ್ಟಣದ ಭತ್ಪುರಿ ಪ್ರದೇಶದಲ್ಲಿ ಬಾಲಕ ತನ್ನ ಮನೆ ಮುಂದೆ ತರಕಾರಿ ಮಾರುತ್ತಿದ್ದಾಗ ಪೊಲೀಸರು ಥಳಿಸಿದರು ಎನ್ನಲಾಗಿದೆ. ಬಾಲಕನನ್ನು ಸಾಯುವಂತೆ ಹೊಡೆದ ಆರೋಪ ಎದುರಿಸುತ್ತಿರುವ ಪೊಲೀಸ್ ಪೇದೆಯ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದು, ಇಡೀ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಕರ್ಫ್ಯೂ ಉಲ್ಲಂಘಿಸಿದ ಆರೋಪದಲ್ಲಿ ಬಾಲಕನನ್ನು ಹಿಡಿದು ದೊಣ್ಣೆಯಿಂದ ಥಳಿಸಿದರು ಎಂದು ಕುಟುಂಬದವರು ಆಪಾದಿಸಿದ್ದಾರೆ.
ಇಷ್ಟು ಸಾಲದೆಂಬಂತೆ ಮತ್ತೆ ಪೊಲೀಸ್ ಠಾಣೆಗೆ ಎಳೆದೊಯ್ದು ತೀವ್ರವಾಗಿ ಥಳಿಸಿದ್ದರಿಂದ ಬಾಲಕನ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ತಕ್ಷಣ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆತನನ್ನು ಕರೆದೊಯ್ಯಲಾಗಿದ್ದು, ಆ ವೇಳೆಗೆ ಆತ ಮೃತಪಟ್ಟಿದ್ದ ಎಂದು ಕುಟುಂಬದವರು ದೂರಿದ್ದಾರೆ. ಘಟನೆ ಸಂಬಂಧ ವಿಜಯ್ ಚೌಧರಿ ಎಂಬ ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದ್ದು, ಸತ್ಯಪ್ರಕಾಶ್ ಎಂಬ ಗೃಹರಕ್ಷಕ ದಳ ಸಿಬ್ಬಂದಿಯೊಬ್ಬರನ್ನು ವಜಾ ಮಾಡಲಾಗಿದೆ.
ಪೊಲೀಸ್ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಸ್ಥಳೀಯರು ಲಕ್ನೋ ರಸ್ತೆ ಕ್ರಾಸ್ ಬಳಿ ರಸ್ತೆ ತಡೆ ಚಳವಳಿ ನಡೆಸಿದರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸಂತ್ರಸ್ತನ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಮತ್ತು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.







