ಬೃಹತ್ ಸೈಬರ್ ದಾಳಿಯಲ್ಲಿ ಏರ್ ಇಂಡಿಯಾ ಗ್ರಾಹಕರ ಕ್ರೆಡಿಟ್ ಕಾರ್ಡ್ ಸಹಿತ ಇತರ ಮಾಹಿತಿ ಸೋರಿಕೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಏರ್ ಇಂಡಿಯಾ ಸಂಸ್ಥೆಯ ಹತ್ತು ವರ್ಷ ಅವಧಿಯ ಗ್ರಾಹಕರ ದತ್ತಾಂಶಗಳು ಸೋರಿಕೆಯಾಗಿರುವ ಆತಂಕಕಾರಿ ಮಾಹಿತಿಯನ್ನು ಸಂಸ್ಥೆ ಹೊರಗೆಡಹಿದೆ. ಗ್ರಾಹಕರ ಕ್ರೆಡಿಟ್ ಕಾರ್ಡ್, ಪಾಸ್ಪೋರ್ಟ್ ಮಾಹಿತಿ ಹಾಗೂ ದೂರವಾಣಿ ಸಂಖ್ಯೆಗಳೂ ಏರ್ ಇಂಡಿಯಾ ಸಂಸ್ಥೆಯ ಡಾಟಾ ಪ್ರೊಸೆಸರ್ ಮೇಲೆ ಫೆಬ್ರವರಿಯಲ್ಲಿ ನಡೆದ ಬೃಹತ್ ಸೈಬರದ ದಾಳಿಯಲ್ಲಿ ಸೋರಿಕೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಆಗಸ್ಟ್ 26, 2011 ಹಾಗೂ ಫೆಬ್ರವರಿ 3, 2021ರ ನಡುವೆ ನೋಂದಣಿಗೊಂಡಿದ್ದ ಸುಮಾರು 45 ಲಕ್ಷ ಗ್ರಾಹಕರ ಮಾಹಿತಿಗಳು ಸೋರಿಕೆಯಾಗಿವೆ ಎಂದು ಘಟನೆ ನಡೆದು ಮೂರು ತಿಂಗಳ ನಂತರ ಏರ್ ಇಂಡಿಯಾ ತಿಳಿಸಿದೆ.
ಮೇಲಿನ ಮಾಹಿತಿಗಳ ಹೊರತಾಗಿ ಗ್ರಾಹಕರ ಹೆಸರುಗಳು, ಜನನ ದಿನಾಂಕ, ಸಂಪರ್ಕ ಮಾಹಿತಿ, ಟಿಕೆಟ್ ಮಾಹಿತಿಗಳೂ ಸೋರಿಕೆಯಾಗಿವೆ ಎಂದು ತಿಳಿದು ಬಂದಿದೆ. ಏರ್ ಇಂಡಿಯಾ ಹೊರತಾಗಿ ಲುಫ್ತಾನ್ಸ, ಯುನೈಟೆಟ್, ಸಿಂಗಾಪುರ್ ಏರ್ಲೈನ್ಸ್ ಒಳಗೊಂಡ ವಿಮಾನಯಾನ ಸಂಸ್ಥೆಗಳ ಸ್ಟಾರ್ ಅಲಾಯನ್ಸ್ ಗೆ ಸೇವೆ ಒದಗಿಸುವ ಜಿನೀವಾ ಮೂಲದ ಪ್ಯಾಸೆಂಜರ್ ಸಿಸ್ಟಂ ಆಪರೇಟರ್ ಸಿಐಟಿಎ ಮೇಲೆ ಈ ದಾಳಿ ನಡೆದಿತ್ತು.
ಯಾವ ಗ್ರಾಹಕರ ಮಾಹಿತಿಗಳು ಸೋರಿಕೆಯಾಗಿವೆ ಎಂಬ ಕುರಿತ ಮಾಹಿತಿಯನ್ನು ನಮ್ಮ ಡಾಟಾ ಪ್ರೊಸೆಸರ್ ಸಂಸ್ಥೆ 25.3.2021 ಹಾಗೂ 5.04.2021ರಂದು ಒದಗಿಸಿತ್ತು ಎಂದು ಏರ್ ಇಂಡಿಯಾ ತಿಳಿಸಿದೆ.
"ಘಟನೆ ಕುರಿತು ತನಿಖೆ ಆರಂಭಿಸಲಾಗಿದೆ ಹಾಗೂ ಸೂಕ್ತ ಪರಿಹಾರೋಪಾಯಗಳನ್ನೂ ಕೈಗೊಳ್ಳಲಾಗುತ್ತಿದೆ ಪ್ರಯಾಣಿಕರು ತಮ್ಮ ವೈಯಕ್ತಿಕ ಮಾಹಿತಿಗಳನ್ನು ಸುರಕ್ಷಿತವಾಗಿಸಲು ಪಾಸ್ವರ್ಡ್ಗಳನ್ನು ಬದಲಾಯಿಸುವಂತೆಯೂ ಸಲಹೆ ನೀಡಲಾಗಿದೆ,'' ಎಂದು ಏರ್ ಇಂಡಿಯಾ ತಿಳಿಸಿದೆ.
Air India data breached in a major Cyber attack. Breach involves Passengers personal Information including Credit Card Info and Passport Details. Other Global Airlines are likely affected too.#airindia #CyberAttack @airindiain@rahulkanwal @sanket @maryashakil pic.twitter.com/XxUORgInJQ
— Jiten Jain (@jiten_jain) May 21, 2021







