"ನಾನೇನು ಹೆಲಿಕಾಪ್ಟರಿನಲ್ಲಿ ಫೋಟೋ ಸೆಶನ್‍ಗೆ ಹೋಗಿಲ್ಲ": ಪ್ರಧಾನಿಯನ್ನು ಪರೋಕ್ಷವಾಗಿ ಕುಟುಕಿದ ಉದ್ಧವ್ ಠಾಕ್ರೆ

ಮುಂಬೈ: ಚಂಡಮಾರುತ ತೌಕ್ತೇದಿಂದ ತೀವ್ರ ಬಾಧಿತ ಕೊಂಕಣ ಪ್ರದೇಶದ ರತ್ನಗಿರಿ ಹಾಗೂ ಸಿಂಧುದುರ್ಗ್ ಜಿಲ್ಲೆಗಳಿಗೆ ಶುಕ್ರವಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಮ್ಮ ಭೇಟಿಯನ್ನು ಕೇವಲ ಮೂರು ಗಂಟೆಗಳಲ್ಲಿ ಪೂರ್ಣಗೊಳಿಸಿದ್ದಾರೆಂದು ವ್ಯಂಗ್ಯವಾಡಿ ಬಿಜೆಪಿ ನಾಯಕರು ಟೀಕಿಸಿರುವುದಕ್ಕೆ ಉದ್ಧವ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
``ನನ್ನ ಭೇಟಿ ಕೇವಲ ಕೆಲ ಗಂಟೆಗಳದ್ದಾಗಿದ್ದರೂ ಚಿಂತೆಯಿಲ್ಲ. ಕನಿಷ್ಠ ನಾನು ಬಾಧಿತ ಸ್ಥಳಗಳಿಗೆ ಖುದ್ದು ಭೇಟಿ ನೀಡಿದ್ದೇನೆಯೇ ಹೊರತು ನಾನೇನು ಹೆಲಿಕಾಪ್ಟರಿನಲ್ಲಿ ಫೋಟೋ ಸೆಶನ್‍ಗೆ ಹೋಗಿಲ್ಲ. ನಾನು ಕೂಡ ಒಬ್ಬ ಛಾಯಾಗ್ರಾಹಕ,'' ಎಂದು ಹೇಳಿ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಕುಟುಕಿದ್ದಾರೆ. ಇತ್ತೀಚೆಗೆ ಮೋದಿ ಗುಜರಾತ್‍ನ ಚಂಡಮಾರುತ ಬಾಧಿತ ಸ್ಥಳಗಳ ವೈಮಾನಿಕ ಸಮೀಕ್ಷೆ ನಡೆಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ಚಂಡಮಾರುತದಿಂದ ಹಾನಿಯುಂಟಾದ ಸ್ಥಳಗಳಿಗೆ ಶುಕ್ರವಾರ ಭೇಟಿ ನೀಡಿದ್ದ ಉದ್ಧವ್, ಬೆಳೆ ಹಾನಿ ಅಂದಾಜನ್ನು ಎರಡು ದಿನಗಳೊಳಗೆ ಮುಗಿಸುವಂತೆ ಸೂಚನೆ ನೀಡಿದ್ದರು.
ಮಾಜಿ ಸೀಎಂ ದೇವೇಂದ್ರ ಫಡ್ನವೀಸ್ ಅವರು ಉದ್ಧವ್ ಭೇಟಿ ಉಲ್ಲೇಖಿಸಿ, ಕೇವಲ ಮೂರು ಗಂಟೆಗಳ ಪ್ರವಾಸದಲ್ಲಿ ಮುಖ್ಯಮಂತ್ರಿ ರಾಜಕೀಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರೆ ವಿಧಾನಪರಿಷತ್ತಿನ ವಿಪಕ್ಷ ನಾಯಕ ಪ್ರವೀಣ್ ದರೇಕರ್ ಪ್ರತಿಕ್ರಿಯಿಸಿ ಕೇವಲ ಮೂರು ಗಂಟೆಗಳಲ್ಲಿ ಚಂಡಮಾರುತದಿಂದ ಹಾನಿಯನ್ನು ಉದ್ಧವ್ ಹೇಗೆ ಅರಿತುಕೊಂಡರು ಎಂದು ಪ್ರಶ್ನಿಸಿದ್ದರು.
ಸಿಂಧುದುರ್ಗ್‍ನ ಮಾಲ್ವನ್ ಎಂಬಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಉದ್ಧವ್ "ವಿಪಕ್ಷಗಳ ಟೀಕೆಗಳಿಗೆ ಉತ್ತರಿಸಲು ನಾನಿಲ್ಲಿ ಬಂದಿಲ್ಲ" ಎಂದರು.







