"ನೀವಿಲ್ಲದೆ ನಾನಿರಲಾರೆ ದೀದಿ, ನನ್ನನ್ನು ಮತ್ತೆ ಪಕ್ಷಕ್ಕೆ ವಾಪಸ್ ಕರೆಸಿಕೊಳ್ಳಿ"
ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಮಾಜಿ ಶಾಸಕಿಯಿಂದ ಮಮತಾ ಬ್ಯಾನರ್ಜಿಗೆ ಪತ್ರ

ಕೊಲ್ಕತ್ತಾ: ವಿಧಾನಸಭಾ ಚುನಾವಣೆಗಿಂತ ಮುನ್ನ ಟಿಎಂಸಿಯಿಂದ ಬಿಜೆಪಿಗೆ ಪಕ್ಷಾಂತರಗೈದಿದ್ದ ಮಾಜಿ ಶಾಸಕಿ ಸೋನಾಲಿ ಗುಹಾ ಶನಿವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದು ಪಕ್ಷ ತೊರೆದಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರಲ್ಲದೆ ಮತ್ತೆ ತನ್ನನ್ನು ಪಕ್ಷಕ್ಕೆ ವಾಪಸ್ ಕರೆಸಿಕೊಳ್ಳುವಂತೆ ಕೋರಿದ್ದಾರೆ.
ತಮ್ಮ ಪತ್ರವನ್ನು ಸೋನಾಲಿ ಟ್ವಿಟ್ಟರ್‍ನಲ್ಲಿ ಶೇರ್ ಮಾಡಿದ್ದಾರೆ. ``ಭಾವಾವೇಶಕ್ಕೊಳಗಾಗಿ ಇನ್ನೊಂದು ಪಕ್ಷ ಸೇರುವ ತಪ್ಪು ನಿರ್ಧಾರ ಕೈಗೊಂಡಿದ್ದೆ. ಅಲ್ಲಿ ಹೊಂದಿಕೊಳ್ಳುವುದು ನನಗೆ ಸಾಧ್ಯವಾಗಿಲ್ಲ. ಮೀನು ಹೇಗೆ ನೀರಿನಿಂದ ಹೊರಗೆ ಇರಲು ಸಾಧ್ಯವಿಲ್ಲವೋ ಅಂತೆಯೇ ನೀವಿಲ್ಲದೆ ನಾನಿರಲಾರೆ ದೀದಿ. ನಿಮ್ಮ ಕ್ಷಮೆಯಾಚಿಸುತ್ತೇನೆ. ನೀವು ನನ್ನನ್ನು ಕ್ಷಮಿಸದೇ ಇದ್ದಲ್ಲಿ ನನಗೆ ಬದುಕಲು ಸಾಧ್ಯವಿಲ್ಲ, ದಯವಿಟ್ಟು ನನಗೆ ವಾಪಸ್ ಬರಲು ಅನುಮತಿಸಿ ಹಾಗೂ ನನ್ನ ಮುಂದಿನ ಜೀವನವನ್ನು ನಿಮ್ಮ ಪ್ರೀತಿಯೊಂದಿಗೆ ಕಳೆಯುತ್ತೇನೆ" ಎಂದು ಸೋನಾಲಿ ಬಂಗಾಳಿ ಭಾಷೆಯಲ್ಲಿ ಪತ್ರ ಬರೆದಿದ್ದಾರೆ.
ನಾಲ್ಕು ಬಾರಿ ಶಾಸಕಿಯಾಗಿ ಆಯ್ಕೆಯಾಗಿರುವ ಹಾಗೂ ಒಂದೊಮ್ಮೆ ಮುಖ್ಯಮಂತ್ರಿ ಮಮತಾ ಅವರ ನೆರಳು ಎಂದೇ ಬಣ್ಣಿಸಲಾಗುತ್ತಿದ್ದ ಸೋನಾಲಿ ಅವರಿಗೆ ಈ ಬಾರಿ ಟಿಕೆಟ್ ದೊರೆಯದೇ ಇದ್ದ ನಂತರ ಅವರು ಬಿಜೆಪಿ ಸೇರಿದ್ದರು. ಚುನಾವಣೆ ಸ್ಪರ್ಧಿಸದೇ ಇದ್ದರೂ ಬಿಜೆಪಿಯನ್ನು ಬಲಪಡಿಸಲು ಶ್ರಮಿಸುವುದಾಗಿ ಅವರು ಹೇಳಿಕೊಂಡಿದ್ದರು.
"ಆದರೆ ಬಿಜೆಪಿಯಲ್ಲಿ ನಾನು ಬೇಡವಾಗಿದ್ದೇನೆ ಎಂದು ಅನಿಸುತ್ತದೆ. ಪಕ್ಷಕ್ಕೆ ತೊರೆಯುತ್ತೇನೆಂದು ಹೇಳಬೇಕೆಂದು ಅನಿಸಿಲ್ಲ, ಅವರು ನನ್ನನ್ನು ಬಳಸಿ ಮಮತಾ ಅವರ ಕುರಿತು ಕೆಟ್ಟ ಮಾತುಗಳನ್ನು ಆಡಬೇಕೆಂದು ಬಯಸಿದ್ದಾರೆ, ಅದು ಸಾಧ್ಯವಿಲ್ಲ" ಎಂದು ಮಾಜಿ ಉಪಸ್ಪೀಕರ್ ಆಗಿರುವ ಸೋನಾಲಿ ಹೇಳಿದ್ದಾರಲ್ಲದೆ ಸಿಎಂ ಮಮತಾ ಅವರನ್ನು ಭೇಟಿಯಾಗಿ ಟಿಎಂಸಿ ಮರುಸೇರ್ಪಡೆಗೊಳ್ಳಲು ಬಯಸಿದ್ದಾಗಿ ತಿಳಿಸಿದ್ದಾರೆ.
প্রিয় দিদি @MamataOfficial @AITCofficial pic.twitter.com/ZOtiSvvUSO
— SONALI GUHA (BOSE) (@SONALIGUHABOSE) May 22, 2021







