ಕಾಂಗ್ರೆಸ್ 'ಟೂಲ್‍ಕಿಟ್' ನಕಲಿ ಅಲ್ಲ; ದೇಶದ ವಿರುದ್ಧ ಅಪಪ್ರಚಾರ ಪೂರ್ವಯೋಜಿತ ಕುಕೃತ್ಯ: ಸಿ.ಟಿ.ರವಿ

ಬೆಂಗಳೂರು, ಮೇ 22: ಕಾಂಗ್ರೆಸ್ ಪಕ್ಷವು ದೇಶದಲ್ಲಿ ಅರಾಜಕತೆ ಹುಟ್ಟು ಹಾಕಿ, ಪರಿಸ್ಥಿತಿ ದುರ್ಲಾಭ ಪಡೆಯಲು, ಪ್ರಧಾನಿ ಮೋದಿ ಮತ್ತು ದೇಶದ ಅವಹೇಳನಕ್ಕೆ ಒಂದು ಷಡ್ಯಂತ್ರ ನಡೆಸಿ `ಟೂಲ್‍ಕಿಟ್' ಮಾಡಿದೆ. ಕಾಂಗ್ರೆಸ್ ಇದನ್ನು ನಕಲಿ ಟೂಲ್‍ಕಿಟ್ ಎನ್ನುತ್ತಿದೆ. ಆದರೆ, ಅದು ನಕಲಿ ಆಗಿದ್ದರೆ ಟೂಲ್‍ಕಿಟ್‍ನಲ್ಲಿ ಇದ್ದ ರೀತಿಯಲ್ಲೆ ಕಾಂಗ್ರೆಸ್ ಕ್ರಿಯೆ ಮತ್ತು ಪ್ರತಿಕ್ರಿಯೆ ಕೇವಲ ಕಾಕತಾಳೀಯವೇ.. ಅಥವಾ ಟೂಲ್‍ಕಿಟ್ ಮಾದರಿಯಲ್ಲೇ ಅವಹೇಳನ ಮತ್ತು ಅಪಪ್ರಚಾರ ನಡೆಯಿತೇ ಎಂದಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಇದು ಕೇವಲ ಕಾಕತಾಳೀಯ ಅಲ್ಲ ಎಂಬುದನ್ನು ಸಾಂದರ್ಭಿಕ ಸಾಕ್ಷಿಗಳು ಪುಷ್ಟೀಕರಿಸುತ್ತವೆ. ಇದು ಪೂರ್ವಯೋಜಿತ ಕುಕೃತ್ಯ ಎಂಬುದು ಸಾಬೀತಾಗುವಂತಿದೆ ಎಂದು ಟೀಕಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರಾಖಂಡದ ಕುಂಭಮೇಳದ ಕುರಿತು `ಸೂಪರ್ ಸ್ಪ್ರೆಡರ್' ಎಂದು ಬಿಂಬಿಸಲು ಟೂಲ್‍ಕಿಟ್‍ನಲ್ಲಿ ಸೂಚಿಸಿದಂತೆ ಕಾಂಗ್ರೆಸ್ ಮುಖಂಡರು ಮತ್ತು ಬೆಂಬಲಿಗರು, ಕೆಲವು ಮಾಧ್ಯಮಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅದೇ ಶಬ್ದವನ್ನು ಪ್ರಯೋಗಿಸಿದ್ದಾರೆ. ಕೋವಿಡ್ ಪ್ರಕರಣವನ್ನು ಗಮನಿಸಿದರೆ ಮಹಾರಾಷ್ಟ್ರ ಗರಿಷ್ಠ ಸಂಖ್ಯೆಯನ್ನು ಹೊಂದಿದೆ. ಕೇರಳ 2ನೆ ಸ್ಥಾನದಲ್ಲಿದೆ. 2 ಲಕ್ಷಕ್ಕೂ ಹೆಚ್ಚು ಜನ ಕುಂಭ ಮೇಳದಲ್ಲಿ ಭಾಗವಹಿಸಿದವರನ್ನು ಪರೀಕ್ಷೆ ಮಾಡಿದರೆ, 1,700 ಜನರಷ್ಟೇ ಪಾಸಿಟಿವ್ ಆಗಿದ್ದಾರೆಂದು ಸ್ಪಷ್ಟಪಡಿಸಿದರು.
ದೇಶದಲ್ಲಿ ಸಾವುಗಳ ವೈಭವೀಕರಣದ ಸೂಚನೆಯೂ ಪಾಲನೆಯಾಗಿದೆ. ರೋಗಿಗಳಲ್ಲಿ ಹಾಹಾಕಾರ ಹಾಗೂ ಆತಂಕ ಸೃಷ್ಟಿಸುವ ಪ್ರಯತ್ನವೂ ನಡೆದಿದೆ. ಬೆಡ್ ಬ್ಲಾಕಿಂಗ್‍ಗೂ ಕಾಂಗ್ರೆಸ್ ಪಕ್ಷದವರು ನೆರವಾಗಿದ್ದಾರೆ. ಪ್ರಧಾನಿಯವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಸೂಚನೆಯಂತೆ ಮೋದಿ ಸ್ಟ್ರೀನ್, ಇಂಡಿಯನ್ ಸ್ಟ್ರೀನ್ ಪದ ಬಳಕೆ ಮಾಡಲಾಗಿದೆ. ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಟ್ವೀಟ್ ವೇಳೆ ಇದೇ ಪದ ಬಳಸಿದ್ದು ಕಾಕತಾಳೀಯವೇ ಎಂದು ಪ್ರಶ್ನಿಸಿದರು. ಇವರಿಗೆ ಚೀನಾ ವೈರಸ್ ಎನ್ನಲು ಧೈರ್ಯ ಇಲ್ಲ ಎಂದು ಸಿ.ಟಿ.ರವಿ ಆಕ್ಷೇಪ ವ್ಯಕ್ತಪಡಿಸಿದರು.
ಸೆಂಟ್ರಲ್ ವಿಸ್ಟಾ ಯೋಜನೆ ಮತ್ತು ಪಿಎಂ ಕೇರ್ ಟ್ಯಾಗ್ ಮಾಡಿ `ಮೋದಿ ಹೌಸ್' ಎಂದು ಟೀಕಿಸಲಾಯಿತು. ಇವೆಲ್ಲವೂ ಕಾಕತಾಳೀಯ ಅಲ್ಲ ಎಂಬುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟ. ಕಾಂಗ್ರೆಸ್ ಪದಾಧಿಕಾರಿ ಸಂಯುಕ್ತ ಬಸು, ಟೂಲ್‍ಕಿಟ್ ಮೂಲಕ ಉತ್ತಮ ಕೆಲಸ ನಡೆದಿದೆ ಎಂದು ಸ್ಪಷ್ಟಪಡಿಸಿದ್ದರು. ಇದೆಲ್ಲವೂ ಪೂರ್ವಯೋಜಿತ ಎಂಬುದನ್ನು ಸ್ಪಷ್ಟಪಡಿಸುತ್ತದೆ. ದೇಶವನ್ನು ಕೆಳಮಟ್ಟದಲ್ಲಿ ತೋರಿಸುವ ಕಾಂಗ್ರೆಸ್‍ನ ಪ್ರಯತ್ನ ರಾಜಕೀಯ ಅಂತ್ಯಕಾಲ ಎಂದು ಅವರು ನುಡಿದರು.
ದೇಶದಲ್ಲಿ ಸುಮಾರು 2.95 ಲಕ್ಷ ಜನರು ನಿಧನರಾಗಿರುವುದು ದುರದೃಷ್ಟಕರ. 2.27 ಕೋಟಿಗೂ ಅಧಿಕ ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಅಪಪ್ರಚಾರ ನಡೆಸುವ ವೇಳೆ ಅಮೆರಿಕ, ಯುರೋಪ್ ದೇಶಗಳ ಸಾವಿನ ಸಂಖ್ಯೆಯನ್ನು ಮರೆಮಾಚಲಾಗಿದೆ. ಮಾರ್ಚ್ 17ರಂದು ವಿವಿಧ ರಾಜ್ಯಗಳ ಸಿಎಂಗಳ ಸಭೆ ಕರೆದ ಪ್ರಧಾನಿಯವರು ಮುಂಜಾಗ್ರತಾ ಕ್ರಮಗಳ ಕುರಿತು ಮುನ್ಸೂಚನೆ ನೀಡಿದ್ದರು. ವರ್ಷದೊಳಗೇ ಎರಡು ಲಸಿಕೆ ಕಂಡುಹಿಡಿಯಲಾಯಿತು. ಆಗ ವಿಜ್ಞಾನಿಗಳನ್ನು ಅವಹೇಳನ ಮಾಡಿ `ಮೋದಿ ವ್ಯಾಕ್ಸಿನ್' ಎಂದು ಲೇವಡಿ ಮಾಡಿದ ಕಾಂಗ್ರೆಸ್ಸಿಗರು, ವಿದೇಶಿ ಮಾನಸಿಕತೆಯ ಹಿನ್ನೆಲೆ ಉಳ್ಳವರಾಗಿದ್ದಾರೆ. ಅಲ್ಲದೇ, ಈಗ ವ್ಯಾಕ್ಸಿನ್‍ಗಾಗಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ, ಅದು ಅವರ ಇಬ್ಬಂದಿತನಕ್ಕೆ ಸಾಕ್ಷಿ ಎಂದು ದೂರಿದರು.
ಕುಂಭಮೇಳವನ್ನು ಸೂಪರ್ ಸ್ಪ್ರೆಡರ್ ಎಂದು ಗುರಿ ಮಾಡಿದವರು ಹಿಂದೂಗಳ ವಿರುದ್ಧದ ತಮ್ಮ ಮಾನಸಿಕತೆಯನ್ನು ಪ್ರತಿಬಿಂಬಿಸಿದ್ದಾರೆ. ಹೈದರಾಬಾದ್, ಪಶ್ಚಿಮ ಬಂಗಾಳದಲ್ಲಿ ದೊಡ್ಡ ಪ್ರಮಾಣದಲ್ಲಿ ರಮಝಾನ್ ಆಚರಣೆ ನಡೆದುದನ್ನು ಸೂಪರ್ ಸ್ಪ್ರೆಡರ್ ಎಂದು ಕಾಂಗ್ರೆಸ್ಸಿಗರು ಕರೆದಿಲ್ಲವೇಕೆ? ಎಂದು ಪ್ರಶ್ನಿಸಿದ ಸಿ.ಟಿ.ರವಿ, ಕಚ್ಚಾವಸ್ತು ಬರಲು ವಿಳಂಬದಿಂದ ಲಸಿಕೆ ಉತ್ಪಾದನೆ ಸ್ವಲ್ಪ ತಡವಾಗಿದೆ. ಕಾಂಗ್ರೆಸ್‍ನ 58 ಜನರು ಸೇರಿ ವಿವಿಧ ವಿರೋಧ ಪಕ್ಷಗಳ ಮುಖಂಡರು ಲಸಿಕೆ ಕುರಿತು ಅಪಪ್ರಚಾರ ಮಾಡಿದ್ದಾರೆ ಎಂದು ಟೀಕಿಸಿದರು. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಪಕ್ಷದ ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ವಕ್ತಾರ ರಾಜ್‍ಕುಮಾರ್ ಪಾಟೀಲ ತೇಲ್ಕೂರ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.







