ಪ್ಯಾಕೇಜ್ ಘೋಷಣೆ: ಪ.ಜಾ., ಪ.ಪಂ, ಹಿಂದುಳಿದ ವರ್ಗಗಳ ಕಡೆಗಣನೆ; ಮಾಜಿ ಸಚಿವ ಸೊರಕೆ ಆರೋಪ
ಉಡುಪಿ, ಮೇ 22: ಕೊರೋನ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಲಾಕ್‌ಡೌನ್‌ನಿಂದ ದಿನ ನಿತ್ಯದ ಆದಾಯವನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದ ಕಾರ್ಮಿಕರ ಬದುಕು ದುಸ್ತರವಾಗಿದೆ. ಕಾಂಗ್ರೆಸ್ ಪಕ್ಷದ ತೀವ್ರ ಒತ್ತಡ ಮತ್ತು ಆಗ್ರಹದ ಪರಿಣಾಮವಾಗಿ ಕೊನೆಗೂ ರಾಜ್ಯದ ಮುಖ್ಯಮಂತ್ರಿಗಳು ಕೊರೊನಾ ಎರಡನೇ ಅಲೆಯ ಲಾಕ್‌ಡೌನ್ ಪ್ಯಾಕೇಜ್ ಘೋಷಣೆ ಮಾಡಿದ್ದು ಇದರಲ್ಲಿ ಪ್ರಮುಖವಾಗಿ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿರುವುದು ವಿಷಾದನೀಯ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ಅವರು, ಹಿಂದುಳಿದ ವರ್ಗಗಳಲ್ಲಿ ಒಂದಾದ ಬಿಲ್ಲವ ಸಮುದಾಯದ ಮಹಿಳೆಯರಿಗೆ ಶೂನ್ಯ ಬಡ್ಡಿದರ ದಲ್ಲಿ ಹಣಕಾಸು ನೆರವನ್ನು ನೀಡಿ ಸ್ತ್ರೀ-ಶಕ್ತಿ ಸ್ವ-ಸಹಾಯ ಸಂಘಗಳನ್ನು ಉತ್ತೇಜಿ ಸುವ ಆಶ್ವಾಸನೆ ಕಾರ್ಯಗತಗೊಂಡಿದ್ದರೆ ಈ ಸಂದರ್ಭದಲ್ಲಿ ಪ್ರಯೋಜನ ವಾಗುತ್ತಿತ್ತು. ಆದರೆ ಇಂದಿಗೂ ಘೋಷಣೆಯೂ ಆಗದೆ ಕಾರ್ಯಗತವೂ ಆಗದೆ ಕೇವಲ ಆಶ್ವಾಸನೆಯಾಗಿಯೇ ಉಳಿಯುವ ಮೂಲಕ ಪ್ಯಾಕೇಜ್‌ನಲ್ಲಿಯೂ ಬಿಲ್ಲವ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಜೀವದ ಹಂಗನ್ನು ತೊರೆದು ಜೀವನೋಪಾಯಕ್ಕಾಗಿ ಮೀನುಗಾರಿಕಾ ವೃತ್ತಿ ನಡೆಸುವ ಮೊಗವೀರರು ಹಾಗೂ ಮೀನು ವ್ಯಾಪಾರ ನಡೆಸುವ ಇತರ ವೃತ್ತಿ ಭಾಂದವರಿಗೆ ಯಾವುದೇ ರೀತಿಯ ಪ್ಯಾಕೇಜ್ ನೀಡದೆ ದ್ರೋಹವೆಸಲಾಗಿದೆ. ತಮ್ಮ ಕುಲ ಕಸುಬನ್ನೇ ಅವಲಂಬಿಸಿ ಬದುಕು ಸಾಗಿ ಸುತ್ತಿರುವ ಕುಂಬಾರ ಸಮಾಜಕ್ಕೆ ಹಾಗೂ ವಿಶ್ವಕರ್ಮ ಸಮಾಜಕ್ಕೆ ಯಾವುದೇ ರೀತಿಯ ಪ್ಯಾಕೇಜ್ ನೀಡದಿರುವುದು ಸರ್ಕಾರದ ನಿರ್ಲಕ್ಷ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದವರು ಹೇಳಿದ್ದಾರೆ.
ಅದೇ ರೀತಿ ಹಿಂದುಳಿದ ವರ್ಗಗಳಾದ ಶೆಟ್ಟಿಗಾರ, ಗಾಣಿಗ ಮತ್ತು ಜೋಗಿ ಹಾಗೂ ಅಲ್ಪಸಂಖ್ಯಾತ ಸಮುದಾಯ, ಅಲ್ಲದೇ ಬೀಡಿ ಕಾರ್ಮಿಕರಿಗೆ ಮತ್ತು ಎಲ್ಲಾ ಸಮಾಜದಲ್ಲಿ ದುಡಿಮೆ ಮಾಡುತ್ತಿರುವವರಿಗೆ ಪ್ಯಾಕೇಜ್ ನೀಡದೆ ಕಡೆಗಣಿಸಲಾಗಿದೆ. ಅದೇ ರೀತಿ ದೇವಸ್ಥಾನ, ಗರಡಿಗಳಲ್ಲಿ ಕೆಲಸ ಮಾಡುವ ಅರ್ಚಕರು ಮತ್ತು ಚಾಕರಿ ಮಾಡುವವರನ್ನು ಹಾಗೂ ನಲ್ಕೆಯವರನ್ನು ಗಣನೆಗೆ ತೆಗೆದುಕೊಂಡು ಸೂಕ್ತ ಸಹಾಯಧನವನ್ನು ಘೋಷಿಸದೇ ವಂಚಿಸಲಾಗಿದೆ.
ಕೂಲಿ ಕೆಲಸ ಮಾಡಿ ದುಡಿದು ತಿನ್ನುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಪರಿಸ್ಥಿತಿ ಲಾಕ್‌ಡೌನ್‌ನಿಂದ ತೀರಾ ಹದಗೆಟ್ಟಿದ್ದು ಈ ವರ್ಗದ ಜನರಿಗೆ ಯಾವುದೇ ಸಹಾಯ ನೀಡದಿರುವುದರ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಸೊರಕೆ, ಕೂಡಲೇ ಈ ಎಲ್ಲಾ ಜಾತಿ ಮತ್ತು ವರ್ಗಗಳ ಜನರಿಗೆ ಸೂಕ್ತ ಪ್ಯಾಕೇಜನ್ನು ಸರಕಾರ ಕೂಡಲೇ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.







