ಕಾಂಗ್ರೆಸ್-ಬಿಜೆಪಿ ಸರಕಾರಕ್ಕೆ ಪ್ರತ್ಯೇಕ ಸಂವಿಧಾನವೇ?: ಕೆ.ಎಸ್.ಈಶ್ವರಪ್ಪ ಪ್ರಶ್ನೆ

ಬೆಂಗಳೂರು, ಮೇ 22: ಸಿದ್ದರಾಮಯ್ಯನವರೇ, ಕಾಂಗ್ರೆಸ್ ಸರಕಾರಕ್ಕೊಂದು ಸಂವಿಧಾನ, ಭಾರತೀಯ ಜನತಾ ಪಕ್ಷಕ್ಕೊಂದು ಸಂವಿಧಾನವೇ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ.
ನಾನು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕನಾಗಿದ್ದಾಗ ರಾಜ್ಯದಲ್ಲಿದ್ದ ಬರಗಾಲ ಪರಿಸ್ಥಿತಿಯನ್ನು ಚರ್ಚಿಸಲು ರಾಜ್ಯದ ಎಲ್ಲ ಜಿಲ್ಲೆಗಳ ಪ್ರವಾಸ ಮಾಡಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಲು ನಿರ್ಧರಿಸಿದ್ದೆ. ನನಗೆ ಆಗ ಎಲ್ಲ ಜಿಲ್ಲಾಧಿಕಾರಿಗಳು ಹೇಳಿದ್ದು ಒಂದೇ ಉತ್ತರ ನೀವು ವಿರೋಧ ಪಕ್ಷದ ನಾಯಕರಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಲು ಸರಕಾರದಿಂದ ಅನುಮತಿ ಇಲ್ಲ ಈ ಕುರಿತು ಸರಕಾರದ ಆದೇಶವಿದೆ ಎಂದು ತಿಳಿಸಿದ್ದರು ಎಂದು ಈಶ್ವರಪ್ಪ ಟ್ವೀಟ್ ಮಾಡಿದ್ದಾರೆ.
ಆಗ ತಾವೇ ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಮಯ. ಬರಗಾಲದ ಪರಿಸ್ಥಿತಿಯನ್ನು ನಿಭಾಯಿಸುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅನುಮತಿ ನೀಡಬೇಕೆಂದು ನಾನು ನಿಮಗೆ ಪತ್ರವನ್ನು ಸಹ ಬರೆದೆ, ನಿಮ್ಮಿಂದ ಅದಕ್ಕೆ ಯಾವ ಉತ್ತರವೂ ಬರಲಿಲ್ಲ ಎಂದು ಈಶ್ವರಪ್ಪ ಟ್ವೀಟ್ ಮಾಡಿದ್ದಾರೆ.





