ಸೋಂಕಿನಿಂದ ಸಾವನ್ನಪ್ಪಿದವರ ಅಸ್ಥಿಯನ್ನ 15 ದಿನಗಳೊಳಗೆ ಪಡೆದುಕೊಳ್ಳದಿದ್ದರೆ ಸರಕಾರದಿಂದಲೇ ವಿಸರ್ಜನೆ:ಸಚಿವ ಆರ್.ಅಶೋಕ್

ಬೆಂಗಳೂರು, ಮೇ 22: ಕೋವಿಡ್ ಸೋಂಕಿನಿಂದ ಪ್ರಾಣ ಕಳೆದುಕೊಂಡವರ ಅಂತಿಮ ಕ್ರಿಯೆಯ ನಂತರದಲ್ಲಿ ಸಾವಿರಾರು ಜನರ ಅಸ್ಥಿಗಳು ಹಿಂಪಡೆಯದೆ ಚಿತಾಗಾರದಲ್ಲಿ ಹಾಗೇ ಉಳಿದುಕೊಂಡಿವೆ. ಇಂತಹ ಚಿತಾಭಸ್ಮವನ್ನ 15 ದಿನಗಳ ನಂತರ ಸರಕಾರವೇ ಗೌರವಪೂರ್ವಕವಾಗಿ ವಿಸರ್ಜನೆ ಮಾಡಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಶನಿವಾರ ಈ ಕುರಿತಂತೆ ಮಾಹಿತಿ ನೀಡಿದ ಅಶೋಕ್, ನಾನಾ ಕಾರಣಗಳಿಂದ ಸೋಂಕಿನಿಂದ ಸಾವನ್ನಪ್ಪಿದವರ ಚಿತಾಭಸ್ಮವನ್ನ ಅವರ ಕುಟುಂಬಸ್ಥರು ಇಂದಿಗೂ ಚಿತಾಗಾರದಿಂದ ತೆಗದುಕೊಂಡು ಹೋಗಿಲ್ಲ. ಈಗಾಗಲೇ ಸಾವಿರಕ್ಕೂ ಅಧಿಕ ಅಸ್ಥಿಗಳು ಚಿತಾಗಾರಗಳಲ್ಲಿ ಉಳಿದುಕೊಂಡಿವೆ. ಸಾಮಾನ್ಯವಾಗಿ ಒಂದೆರಡು ದಿನಗಳ ನಂತರ ಅವರ ಸಂಬಂಧಿಗಳು ಬಂದು ಅಸ್ಥಿ ತೆಗೆದುಕೊಂಡು ಹೋಗುತ್ತಾರೆ.
ಆದರೆ, ಕೆಲ ಪ್ರಕರಣಗಳಲ್ಲಿ ಹಲವು ದಿನಗಳಿಂದ ಸಂಬಂಧಿಸಿದವರು ಬರದೆ ಅನೇಕ ಅಸ್ಥಿಗಳು ಚಿತಾಗಾರಗಳಲ್ಲಿ ಹಾಗೆ ಉಳಿದುಕೊಂಡಿವೆ. ಈಗಾಗಲೇ ಸಂಬಂಧಿಸಿದವರನ್ನ ಕರೆ ಮಾಡಿ ಸಂಪರ್ಕಿಸಲು ಪ್ರಯತ್ನಿಸಲಾಗಿದ್ದು, ಅವರ ಫೋನ್ ನಂಬರ್ ಸ್ವಿಚ್ ಆಫ್ ಆಗಿವೆ. ಹೀಗಾಗಿ ಆ ಚಿತಾಭಸ್ಮವನ್ನ ಸರಕಾರವೇ ಗೌರವಪೂರ್ವಕವಾಗಿ ವಿಸರ್ಜನೆ ಮಾಡುವ ನಿರ್ಧಾರ ಮಾಡಿದೆ ಎಂದು ತಿಳಿಸಿದರು.
ಈ ಕುರಿತಂತೆ ಗಡುವು ನಿಗದಿಪಡಿಸಿದ್ದರ ಕುರಿತು ಮಾತನಾಡಿದ ಅವರು, ಇನ್ನು ಮುಂದೆ ಸಂಬಂಧಿಸಿದವರ ಅಸ್ಥಿಗಳನ್ನ 15 ದಿನಗಳ ಕಾಲ ಕುಟುಂಬಸ್ಥರಿಗೆ ಹಸ್ತಾಂತರಿಸುವದಕ್ಕಾಗಿ ಕಾಯ್ದಿರಿಸಲಾಗುತ್ತದೆ. ಅಷ್ಟರೊಳಗೆ ಸಂಬಂಧಪಟ್ಟವರು ಬಂದು ತೆಗೆದುಕೊಂಡು ಹೋಗದಿದ್ದಲ್ಲಿ, ಅವರ ಪರವಾಗಿ ಸರಕಾರವೇ ವಿಧಿವತ್ತಾಗಿ ಆ ಅಸ್ಥಿಗಳನ್ನ ನೀರಿನಲ್ಲಿ ವಿಸರ್ಜಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ 15 ದಿನಗಳೊಳಗೆ ಬಂದು ತಮ್ಮವರ ಚಿತಾಭಸ್ಮವನ್ನ ಪಡೆದುಕೊಂಡು ಹೋಗಬೇಕು ಎಂದು ಅವರು ಮನವಿ ಮಾಡಿದರು.







