ಮುಕ್ತ ಆಮದಿಗೆ ಮೋದಿ ಸರಕಾರದ ಅನುಮತಿ: ಬೇಳೆಕಾಳು ಕೃಷಿಕರು, ವ್ಯಾಪಾರಿಗಳಿಗೆ ಭಾರೀ ನಷ್ಟದ ಭೀತಿ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಮೇ 22: ಕೆಲವು ಬೇಳೆಗಳ ಮುಕ್ತ ಆಮದಿಗೆ ಅವಕಾಶ ಕಲ್ಪಿಸಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಮೇ 15ರಂದು ಹೊರಡಿಸಿರುವ ಆದೇಶವು ದೇಶಾದ್ಯಂತ ಮಾರುಕಟ್ಟೆಗಳಲ್ಲಿ ತಲ್ಲಣ ಸೃಷ್ಟಿಸಿದೆ. ದೇಶಿಯ ಮಾರುಕಟ್ಟೆಗಳಲ್ಲಿ ಈಗಾಗಲೇ ಇವುಗಳ ಬೆಲೆಗಳು ಇಳಿಯುತ್ತಿವೆ. ಬೆಲೆಗಳು ಇನ್ನಷ್ಟು ಕುಸಿಯುವ ಮತ್ತು ಉತ್ಪಾದನೆ ಕಡಿಮೆಯಾಗುವ ಭೀತಿ ಕೃಷಿಕರು ಮತ್ತು ವ್ಯಾಪಾರಿಗಳಲ್ಲಿ ಮನೆಮಾಡಿದೆ.
ಯಾರೇ ಆದರೂ ಎಷ್ಟೇ ವೌಲ್ಯದ ತೊಗರಿ ಬೇಳೆ,ಹೆಸರು ಮತ್ತು ಉದ್ದಿನ ಬೇಳೆಯನ್ನು ಅ.31ರವರೆಗೆ ಆಮದು ಮಾಡಿಕೊಳ್ಳಬಹುದು ಎಂದು ಆದೇಶದಲ್ಲಿ ಹೇಳಲಾಗಿದೆ.
ಈ ಆದೇಶದಿಂದಾಗಿ ಮೂರು ವರ್ಷಗಳ ಬಳಿಕ ಈ ಬೇಳೆಗಳ ಆಮದು ‘ನಿರ್ಬಂಧಿತ ’ ವರ್ಗದಿಂದ ‘ಮುಕ್ತ ’ವರ್ಗಕ್ಕೆ ಸೇರಿದೆ. 2017,ಆಗಸ್ಟ್ನಿಂದ ಬೇಳೆಕಾಳುಗಳ ಆಮದು ಪ್ರಮಾಣಾತ್ಮಕ ನಿರ್ಬಂಧಗಳಿಗೆ ಒಳಪಟ್ಟಿತ್ತು. ಆಮದು ಮಾಡಿಕೊಳ್ಳುವ ಪ್ರಮಾಣವನ್ನು ಸರಕಾರವೇ ನಿರ್ಧರಿಸುತ್ತಿತ್ತು ಮತ್ತು ಮಿಲ್ಗಳು,ವ್ಯಾಪಾರಿಗಳು ಮತ್ತು ಸಂಸ್ಕರಣಾ ಉದ್ಯಮಗಳಂತಹ ಕೆಲವರಿಗೆ ಮಾತ್ರ ಆಮದು ಮಾಡಿಕೊಳ್ಳಲು ಅನುಮತಿ ನೀಡುತ್ತಿತ್ತು.
ಸರಕಾರದ ಈ ಆದೇಶವು ಬೆಲೆ ಕುಸಿತಕ್ಕೆ ಕಾರಣವಾಗಲಿದೆ ಮತ್ತು ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಎಸ್ಪಿ)ಗಿಂತ ಹೆಚ್ಚಿನ ಮಾರುಕಟ್ಟೆ ಬೆಲೆಗಳನ್ನು ಪಡೆಯುತ್ತಿರುವ ರೈತರಿಗೂ ಹೊಡೆತ ನೀಡಲಿದೆ. ಇದರ ಪರಿಣಾಮವಾಗಿ ಮುಂದಿನ ಮುಂಗಾರು ಹಂಗಾಮಿನಲ್ಲಿ ರೈತರ ಬೇಳೆಕಾಳುಗಳನ್ನು ಕಡಿಮೆ ಬಿತ್ತನೆ ಮಾಡುತ್ತಾರೆ,ಇದರಿಂದ ಉತ್ಪಾದನೆ ಕುಸಿಯುತ್ತದೆ ಮತ್ತು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಎನ್ನುವುದು ಉದ್ಯಮದ ತಜ್ಞರ ಅಭಿಪ್ರಾಯವಾಗಿದೆ.
ಆದೇಶದಿಂದ ಎಂಎಸ್ಪಿಗಿಂತ ಅಧಿಕ ದರಗಳಲ್ಲಿ ಈ ಸರಕುಗಳನ್ನು ಖರೀದಿಸಿ ದಾಸ್ತಾನಿಟ್ಟುಕೊಂಡಿರುವ ವ್ಯಾಪಾರಿಗಳು ನಷ್ಟವನ್ನು ಅನುಭವಿಸುವ ಭೀತಿಯೂ ವ್ಯಕ್ತವಾಗಿದೆ. ಭಾರತದಿಂದ ಭಾರೀ ಬೇಡಿಕೆಯನ್ನು ನಿರೀಕ್ಷಿಸಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗಾಗಲೇ ಬೇಳೆಗಳ ಬೆಲೆಗಳಲ್ಲಿ ಏರಿಕೆಯಾಗಿದೆ. ಆದರೆ ಈ ಬೆಲೆ ಏರಿಕೆಯ ಬಿಸಿಯನ್ನು ಬಳಕೆದಾರರು ಅಷ್ಟಾಗಿ ಅನುಭವಿಸುವ ಸಾಧ್ಯತೆಗಳಿಲ್ಲ ಎಂದು ತಜ್ಞರು ಹೇಳಿದ್ದಾರೆ.