"ಇದನ್ನು ಸಾಬೀತುಪಡಿಸಿ": ಅಮರಿಂದರ್ ಸಿಂಗ್ ಗೆ ನವಜೋತ್ ಸಿಂಗ್ ಸಿಧು ಸವಾಲು

ಚಂಡೀಗಢ: ತಾನು ಆಮ್ ಆದ್ಮಿ ಪಕ್ಷ ಸೇರಬಹುದು ಎಂಬ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿಕೆಯಿಂದ ಆಕ್ರೋಶಗೊಂಡಿರುವ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು,ತಾನು ಇತರ ಪಕ್ಷದ ಯಾವುದೇ ನಾಯಕರನ್ನು ಭೇಟಿ ಮಾಡಿರುವುದನ್ನು ಸಾಬೀತುಪಡಿಸುವಂತೆ ಸವಾಲು ಹಾಕಿದ್ದಾರೆ.
ತಾನು ಯಾರಲ್ಲೂ ಯಾವುದೇ ಹುದ್ದೆ ಕೇಳಿಲ್ಲ ಆದರೆ ಹಲವು ಬಾರಿ ಕ್ಯಾಬಿನೆಟ್ ಸ್ಥಾನದ ಆಫರ್ ಲಭಿಸಿದೆ ಎಂದು ಅಮೃತಸರದ ಶಾಸಕ ಹೇಳಿದರು.
ತನ್ನ ಇತ್ತೀಚಿನ ಟ್ವೀಟ್‌ನಲ್ಲಿ, ನವಜೋತ್ ಸಿಧು ಅವರು ವೀಡಿಯೊವೊಂದನ್ನು ಅಪ್‌ಲೋಡ್ ಮಾಡಿದ್ದಾರೆ, ಅದರಲ್ಲಿ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಮುಖಂಡರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗಿದ್ದ ತಮ್ಮ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ.
ಪಂಜಾಬ್‌ನ ಫರೀದ್‌ಕೋಟ್‌ನಲ್ಲಿ ಧಾರ್ಮಿಕ ಪಠ್ಯವೊಂದನ್ನು ಅಪವಿತ್ರಗೊಳಿಸುವುದರ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ 2015 ರ ಕೋಟ್‌ಕಾಪುರ ಗುಂಡಿನ ಘಟನೆಯ ತನಿಖೆಯನ್ನು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಕಳೆದ ತಿಂಗಳು ರದ್ದುಪಡಿಸಿದ ನಂತರ ನವಜೋತ್ ಸಿಧು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಟೀಕಿಸಿದ್ದಾರೆ.
ಪಂಜಾಬ್ ಮುಖ್ಯಮಂತ್ರಿಯೂ ಕೂಡ ನವಜೋತ್ ಸಿಧು ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರ ಆಕ್ರೋಶವನ್ನು "ಸಂಪೂರ್ಣ ಅಶಿಸ್ತು " ಎಂದು ಕರೆದಿದ್ದರು. ಸಿಧು ಅವರು ಆಮ್ ಆದ್ಮಿ ಪಕ್ಷಕ್ಕೆ ತೆರಳಬಹುದು ಎಂದು ಟಾಂಗ್ ನೀಡಿದ್ದರು..