ಮಂಗಳೂರು: ನಾಯಿಯನ್ನು ಬೈಕಿಗೆ ಕಟ್ಟಿ ಎಳೆದೊಯ್ದ ಆರೋಪಿ ಸೆರೆ
ಮತ್ತೊಂದು ಅಮಾನವೀಯ ಕೃತ್ಯ

ಈರಯ್ಯ ಬಸಪ್ಪ ಹಿರೇಮಠ್
ಮಂಗಳೂರು, ಮೇ 22: ಒಂದುವರೆ ತಿಂಗಳ ಹಿಂದೆ ಸುರತ್ಕಲ್ ಸಮೀಪ ನಾಯಿಯೊಂದನ್ನು ಬೈಕಿಗೆ ಕಟ್ಟಿ ಎಳೆದೊಯ್ದ ಘಟನೆ ಜನರ ಮನಸ್ಸಿನಲ್ಲಿ ಮಾಸುವ ಮುನ್ನ ನಗರದಲ್ಲಿ ಮತ್ತೊಂದು ಅಮಾನವೀಯ ಘಟನೆ ಶನಿವಾರ ನಡೆದಿದೆ.
ನಗರದ ಮೇರಿಹಿಲ್ನಲ್ಲಿ ನಾಯಿಯೊಂದನ್ನು ಬೈಕಿಗೆ ಕಟ್ಟಿ ಹಿಂಸಾತ್ಮಕವಾಗಿ ಎಳೆದೊಯ್ದ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಕಾವೂರು ಪೊಲೀಸರು ಗುಲ್ಬರ್ಗ ಮೂಲದ ಈರಯ್ಯ ಬಸಪ್ಪ ಹಿರೇಮಠ್ ಎಂಬಾತನನ್ನು ಬಂಧಿಸಿದ್ದಾರೆ.
ಆರೋಪಿ ಬೈಕ್ ಗೆ ನಾಯಿಯನ್ನು ಕಟ್ಟಿ ಎಳೆದೊಯ್ಯುತ್ತಿರುವ ದೃಶ್ಯ ಇಲ್ಲಿನ ಅಪಾರ್ಟ್ಮೆಂಟ್ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ರಸ್ತೆಯಲ್ಲಿ ನಾಯಿಯ ರಕ್ತ ಹರಿದಿರುವುದು ಕೂಡ ಘಟನೆಗೆ ಸಾಕ್ಷಿಯಾಗಿತ್ತು. ಕೊಂಚಾಡಿ ಕಡೆಯಿಂದ ಬೈಕ್ನಲ್ಲಿ ನಾಯಿಯನ್ನು ಕಟ್ಟಿ ಎಳೆದು ತಂದಿರುವು ದನ್ನು ಪ್ರತ್ಯಕ್ಷದರ್ಶಿಗಳು ಗಮನಿಸಿದ್ದಾರೆ. ಬಳಿಕ ಮೇರಿಹಿಲ್ ಹೆಲಿಪ್ಯಾಡ್ ಬಳಿ ನಾಯಿಯನ್ನು ಬಿಸಾಡಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎನಿಮಲ್ ಕೇರ್ ಟ್ರಸ್ಟಿನ ಸ್ವಯಂ ಸೇವಕರು ಗಾಯಗೊಂಡ ನಾಯಿಗಾಗಿ ಹುಡುಕಾಟ ನಡೆಸಿದ್ದರು ಎಂದು ತಿಳಿದುಬಂದಿದೆ.
ಒಂದುವರೆ ತಿಂಗಳ ಹಿಂದೆ ಸುರತ್ಕಲ್ ಬಳಿ ಬೈಕ್ಗೆ ನಾಯಿಯನ್ನು ಕಟ್ಟಿ ಎಳೆದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಮತ್ತೊಂದು ಅಮಾನವೀಯ ಘಟನೆಗೆ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.





