ಕೋವಿಡ್ ಲಸಿಕೆ ಕುರಿತು ಸಾರ್ವಜನಿಕ ಮಾಹಿತಿ: ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರ ಪ್ರಕಟಣೆ

ಬೆಂಗಳೂರು, ಮೇ 22: ಕೋವಿಡ್-19 ಲಸಿಕಾಕರಣದ ಕುರಿತು ಸಾರ್ವಜನಿಕರಲ್ಲಿ ಮೂಡಿರುವ ಗೊಂದಲಗಳನ್ನು ನಿವಾರಿಸಲು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಪ್ರಕಟಣೆ ಹೊರಡಿಸಿದ್ದಾರೆ.
45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ: ಕೋವಿಶೀಲ್ಡ್ ಮೊದಲನೆ ಡೋಸ್-ನಗರ ಪ್ರದೇಶಗಳಲ್ಲಿ ಆನ್‍ಲೈನ್ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆನ್‍ಸೈಟ್ ನೋಂದಣಿ ಮುಖಾಂತರ ಲಸಿಕಾಕರಣ ನಡೆಸುವುದು. ಕೋವಿಶೀಲ್ಡ್ ಎರಡನೆ ಡೋಸ್-ಹತ್ತಿರದ ಕೋವಿಡ್-19 ಲಸಿಕಾಕರಣ ಕೇಂದ್ರಕ್ಕೆ ನೇರವಾಗಿ ತೆರಳಬಹುದು.
ಕೋವ್ಯಾಕ್ಸಿನ್ ಮೊದಲನೆ ಡೋಸ್ ಸದ್ಯಕ್ಕೆ ಲಭ್ಯವಿಲ್ಲ. ಕೋವ್ಯಾಕ್ಸಿನ್ ಎರಡನೆ ಡೋಸ್ ಪಡೆಯಬೇಕಾದ ಫಲಾನುಭವಿಗಳಿಗೆ ಎಸ್.ಎಂ.ಎಸ್. ಕಳುಹಿಸಲಾಗುವುದು. ಎಸ್.ಎಂ.ಎಸ್.ನಲ್ಲಿ ತಿಳಿಸಲಾದ ಕೋವಿಡ್-19 ಲಸಿಕಾಕರಣ ಕೇಂದ್ರದಲ್ಲಿ ನಿಗದಿತ ಸಮಯಕ್ಕೆ ಫಲಾನುಭವಿಗಳು ಲಸಿಕೆ ಪಡೆಯಬಹುದು.
18-44 ವರ್ಷ ವಯೋಮಾನದವರಿಗೆ ಕೋವಿಡ್ ಲಸಿಕೆ: ಸದ್ಯಕ್ಕೆ ಲಭ್ಯವಿರುವುದಿಲ್ಲ. ಆದರೆ, ರಾಜ್ಯ ಗುರುತಿಸಿರುವ ಕೋವಿಡ್-19 ಮುಂಚೂಣಿ ಕಾರ್ಯಕರ್ತರಿಗೆ, ದುರ್ಬಲ ಗುಂಪಿನವರಿಗೆ ಮತ್ತು ಆದ್ಯತೆ ಗುಂಪಿನವರಿಗೆ ಆಯಾ ಗುಂಪಿನ ನಿಯೋಜಿತ ನೋಡಲ್ ಅಧಿಕಾರಿಗಳು ಲಸಿಕಾಕರಣದ ದಿನಾಂಕ ಮತ್ತು ಸಮಯದ ಮಾಹಿತಿಯನ್ನು ನೀಡುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.





