ಬೆಂಗಳೂರು: ಮಣ್ಣು ಕುಸಿದು ಕಾರ್ಮಿಕರಿಬ್ಬರು ಮೃತ್ಯು
ಬೆಂಗಳೂರು, ಮೇ 22: ಕಾಮಗಾರಿ ಹಂತದಲ್ಲಿದ್ದ ಕಟ್ಟಡದ ಕೆಳಭಾಗದಲ್ಲಿ ಏಕಾಏಕಿ ಮಣ್ಣು ಕುಸಿದ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಪ್ಪಳ ಮೂಲದ ಭೀಮಣ್ಣ(37), ಜಂಬಣ್ಣ(40) ಮೃತಪಟ್ಟಿದ್ದು, ಘಟನೆಯಲ್ಲಿ ಮತ್ತೋರ್ವ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಮಾರತಹಳ್ಳಿ ಸಮೀಪದ ದೇವರಬೀಸನಹಳ್ಳಿ ಬಳಿ ವಜ್ರಂ ಕನ್‍ಸ್ಟ್ರಕ್ಷನ್ ಕಂಪೆನಿ ನಡೆಸುತ್ತಿದ್ದ ಕಾಮಗಾರಿ ವೇಳೆ ಶನಿವಾರ ಮಧ್ಯಾಹ್ನ ಸುಮಾರಿಗೆ ಈ ದುರಂತ ಸಂಭವಿಸಿದೆ. ಎಂದಿನಂತರೆ ಒಟ್ಟು ಆರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು.
ಆ ಪೈಕಿ ಇಬ್ಬರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದು, ಇನ್ನೊಬ್ಬನಿಗೆ ತೀವ್ರ ಗಾಯಗಳಾಗಿವೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕಾರ್ಮಿಕರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಸ್ಥಳಕ್ಕೆ ಮಾರತಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮೊಕದ್ದಮೆ ದಾಖಲಾಗಿದೆ.





