ಡಬ್ಲ್ಯುಎಚ್ಒ ತುರ್ತು ಬಳಕೆ ಲಸಿಕೆ ಪಟ್ಟಿಯಲ್ಲಿ ಕೊವ್ಯಾಕ್ಸಿನ್ ಇಲ್ಲ

ಹೊಸದಿಲ್ಲಿ,ಮೇ 22: ಕೋವಿಡ್-19 ಲಸಿಕೆಯನ್ನು ತೆಗೆದುಕೊಂಡಿರುವ ವಿದೇಶಿ ಪ್ರಯಾಣಿಕರಿಗೆ ತಮ್ಮ ಗಡಿಗಳನ್ನು ತೆರೆಯಲು ಹಲವಾರು ದೇಶಗಳು ಸಜ್ಜಾಗುತ್ತಿವೆ. ಆದರೆ ಭಾರತ ಬಯೊಟೆಕ್ ತಯಾರಿಸಿರುವ ಕೊವ್ಯಾಕ್ಸಿನ್ ಲಸಿಕೆಗೆ ಹಲವಾರು ದೇಶಗಳು ಇನ್ನೂ ಅನುಮತಿ ನೀಡಿಲ್ಲ. ಹೀಗಾಗಿ ಕೊವ್ಯಾಕ್ಸಿನ್ ಲಸಿಕೆ ಪಡೆದುಕೊಂಡಿರುವ ಭಾರತೀಯರು ವಿದೇಶಗಳಿಗೆ ಪ್ರಯಾಣಿಸಲು ಅರ್ಹರಾಗದಿರಬಹುದು.
ವಿಶ್ವಾದ್ಯಂತ 130ಕ್ಕೂ ಅಧಿಕ ದೇಶಗಳು ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಲಸಿಕೆಯನ್ನು ಒಪ್ಪಿಕೊಂಡಿದ್ದರೆ,ಕೇವಲ ಒಂಭತ್ತು ದೇಶಗಳಲ್ಲಿ ಕೊವ್ಯಾಕ್ಸಿನ್ ಸ್ವೀಕೃತಗೊಂಡಿದೆ.
ಅಲ್ಲದೆ ಕೊವ್ಯಾಕ್ಸಿನ್ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್)ಯ ತುರ್ತು ಬಳಕೆ ಪಟ್ಟಿಯಲ್ಲೂ ಇಲ್ಲ. ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಭಾರತ ಬಯೊಟೆಕ್ ಆಸಕ್ತಿಯನ್ನು ಸಲ್ಲಿಸಿದೆಯಾದರೂ ಇನ್ನಷ್ಟು ಹೆಚ್ಚಿನ ಮಾಹಿತಿಗಳು ಅಗತ್ಯವಾಗಿವೆ ಎಂದು ಇತ್ತೀಚಿನ ಡಬ್ಲುಎಚ್ಒ ಮಾರ್ಗಸೂಚಿ ದಾಖಲೆಯು ತೋರಿಸಿದೆ.
ಈ ವರದಿಗಳಿಗೆ ಭಾರತ ಬಯೊಟೆಕ್ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ.