ಆರೆಸ್ಸೆಸ್ ಪ್ರೊಟೊ-ಫ್ಯಾಶಿಸ್ಟ್ ಸಂಘ ಎಂದದ್ದಕ್ಕೆ ಕೇರಳ ಪ್ರಾಧ್ಯಾಪಕರ ಅಮಾನತು: ತೀವ್ರ ಖಂಡನೆ
ಅಮಾನತು ರದ್ದುಗೊಳಿಸುವಂತೆ ಕಾಂಗ್ರೆಸ್, ಸಿಪಿಎಂ ಒತ್ತಾಯ

photo: national herald
ತಿರುವನಂತಪುರ: ಅಂತರ್ ರಾಷ್ಟ್ರೀಯ ಸಂಬಂಧ ಹಾಗೂ ರಾಜಕೀಯ ಇಲಾಖೆಯಲ್ಲಿ ಬೋಧಕರಾಗಿರುವ ಕೇರಳ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಗಿಲ್ಬರ್ಟ್ ಸೆಬಾಸ್ಟಿಯನ್ ಆರೆಸ್ಸೆಸ್ ಅನ್ನು "ಪ್ರೊಟೊ-ಫ್ಯಾಸಿಸ್ಟ್" ಸಂಘಟನೆ ಎಂದು ಕರೆದಿದ್ದಕ್ಕಾಗಿ ಅಮಾನತುಗೊಳಿಸಲಾಗಿದೆ.
ಆರೆಸ್ಸೆಸ್ ಅಂಗಸಂಸ್ಥೆ ವಿದ್ಯಾರ್ಥಿಗಳ ಸಂಘಟನೆ ಎಬಿವಿಪಿ, ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ದೂರು ನೀಡಿದ ನಂತರ ಸೆಬಾಸ್ಟಿಯನ್ ಅವರನ್ನು ಅಮಾನತುಗೊಳಿಸಲಾಗಿದೆ.
ಪ್ರಾಧ್ಯಾಪಕ ಸೆಬಾಸ್ಟಿಯನ್ ಅವರ ಅಮಾನತು ರದ್ದುಪಡಿಸುವಂತೆ ಒತ್ತಾಯಿಸಿರುವ ಸಿಪಿಎಂ ನಾಯಕ ವಿ. ಶಿವದಾಸನ್ ಅವರು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರಿಗೆ ಪತ್ರ ಬರೆದು ಗಿಲ್ಬರ್ಟ್ ಸೆಬಾಸ್ಟಿಯನ್ ಅವರನ್ನು ಅಮಾನತುಗೊಳಿಸಿರುವುದು “ಅನ್ಯಾಯ” ಎಂದಿದ್ದಾರೆ.
"ಒಬ್ಬ ಅಕಾಡೆಮಿಕ್ ತನ್ನ ದೃಷ್ಟಿಕೋನದಿಂದ ಮಾತನಾಡಿದ್ದಕ್ಕಾಗಿ ಅಮಾನತುಗೊಳಿಸುವುದು ಮುಕ್ತ ಚಿಂತನೆ ಹಾಗೂ ವಿಮರ್ಶೆಯನ್ನು ಮೌನಗೊಳಿಸುವುದಕ್ಕೆ ಸಮಾನವಾಗಿದೆ. ಜವಾಬ್ದಾರಿಯುತ ಪೌರತ್ವವನ್ನು ವಿಕಶಿಸಲು ಇದು ನಿರ್ಣಾಯಕವಾದ ಕಾರಣ ಯಥಾಸ್ಥಿತಿಯನ್ನು ಪ್ರಶ್ನಿಸಲು ಶಿಕ್ಷಣವು ಒತ್ತಾಯಿಸುತ್ತದೆ. ವಾಕ್ ಸ್ವಾತಂತ್ರ್ಯವನ್ನು ಶಿಕ್ಷಕರಿಗೆ ನಿರಾಕರಿಸಲಾಗುವುದಿಲ್ಲ. ಅಮಾನತುಗೊಳಿಸುವ ಈ ಕಾರ್ಯವು ಶಿಕ್ಷಣ ತಜ್ಞರ ಬೌದ್ಧಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತದೆ. ಒಂದು ತರಗತಿಯು ಮುಕ್ತ ಚರ್ಚೆಗೆ ಸ್ಥಳವಾಗಿರಬೇಕು. ಅಲ್ಲಿ ವೈವಿಧ್ಯಮಯ ವಿಚಾರಗಳು ಬೇರೂರುತ್ತವೆ ”ಎಂದು ಶಿವದಾಸನ್ ಪತ್ರದಲ್ಲಿ ತಿಳಿಸಿದ್ದಾರೆ.
ತರಗತಿಯಲ್ಲಿ ನಡೆದ ಚರ್ಚೆಯಲ್ಲಿ, ಸೆಬಾಸ್ಟಿಯನ್ ಆರೆಸ್ಸೆಸ್ ಕುರಿತು “ಪ್ರೊಟೊ-ಫ್ಯಾಸಿಸಂ” ಎಂಬ ಪದವನ್ನು ಬಳಸಿದ್ದರು. ಪ್ರೊಫೆಸರ್ ಸೆಬಾಸ್ಟಿಯನ್ ಅವರ ಅಮಾನತು ರದ್ದುಗೊಳಿಸಲು ತಾವು ಮಧ್ಯಪ್ರವೇಶಿಸಬೇಕೆಂದು ಕೋರಿ ಶಶಿ ತರೂರ್ ಹಾಗೂ ಕಾಸರಗೋಡು ಲೋಕಸಭಾ ಸದಸ್ಯ ರಾಜಮೋಹನ್ ಉನ್ನಿತಾನ್ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ರಮೇಶ್ ಪೋಖ್ರಿಯಾಲ್ ನಿಶಾಂಕ್ ಗೆ ಪತ್ರ ಬರೆದಿದ್ದಾರೆ.







