ಗುಜರಾತ್: 13 ವರ್ಷದ ಬಾಲಕನಲ್ಲಿ ಕಪ್ಪು ಶಿಲೀಂಧ್ರ ಸೋಂಕು ಪತ್ತೆ

ಹೊಸದಿಲ್ಲಿ, ಮೇ 22: ಕೊರೋನ ಸೋಂಕಿನಿಂದ ಚೇತರಿಸಿಕೊಂಡಿರುವ ಗುಜರಾತ್ ಅಹ್ಮದಾಬಾದ್ನ 13 ವರ್ಷದ ಬಾಲಕನಲ್ಲಿ ಕಪ್ಪು ಶಿಲೀಂಧ್ರ ಸೋಂಕು ಪತ್ತೆಯಾಗಿದೆ. ಭಾರತದಲ್ಲಿ ಮಕ್ಕಳಲ್ಲಿ ಕಪ್ಪು ಶಿಲೀಂಧ್ರ ಪತ್ತೆಯಾಗುತ್ತಿರುವುದು ಇದೇ ಮೊದಲು. ‘‘ಈ ಬಾಲಕ ಕೊರೋನ ಸಾಂಕ್ರಾಮಿಕ ರೋಗ ಲಕ್ಷಣದೊಂದಿಗೆ ನಮ್ಮಲ್ಲಿಗೆ ಬಂದಿದ್ದ. ಕೊರೋನ ಪರೀಕ್ಷೆ ನಡೆಸಿದಾಗ ಸೋಂಕು ತಗಲಿರುವುದು ದೃಢಪಟ್ಟಿತ್ತು. ಶಿಷ್ಟಾಚಾರದಂತೆ ಚಿಕಿತ್ಸೆ ನೀಡಿದ ಬಳಿಕ ಆತ ಗುಣಮುಖನಾಗಿದ್ದ. ಆದರೆ, ಆಸ್ಪತ್ರೆಯಿಂದ ಬಿಡುಗಡೆಯಾದ ಅಲ್ಪಾವಧಿಯಲ್ಲಿ ಆತನಿಗೆ ಹಲ್ಲು ನೋವು ಕಾಣಿಸಿಕೊಂಡಿತು. ಅಂಗುಳದಲ್ಲಿ ಸೋಂಕು ಉಂಟಾಗಿತ್ತು. ಅದು ಕಪ್ಪು ಶಿಲೀಂಧ್ರ ಸೋಂಕಾಗಿ ಪರಿವರ್ತಿತವಾಗಿತ್ತು’’ ಎಂದು ಬಾಲಕನಿಗೆ ಚಿಕಿತ್ಸೆ ನೀಡುತ್ತಿರುವ ಮಕ್ಕಳ ರೋಗ ತಜ್ಞ ಡಾ. ಅಭಿಷೇಕ್ ಬನ್ಸಾಲ್ ತಿಳಿಸಿದ್ದಾರೆ.
‘‘ಕಪ್ಪು ಶಿಲೀಂಧ್ರ ಸೋಂಕಿನ ಹಿನ್ನೆಲೆಯಲ್ಲಿ ಆತನಿಗೆ ಶಸ್ತ್ರಚಿಕಿತ್ಸೆ ನಡೆಸಿ ಬಲ ಬದಿಯ ಅಂಗುಳು ಹಾಗೂ ಹಲ್ಲುಗಳನ್ನು ತೆಗೆಯಲಾಯಿತು. ಈಗ ಬಾಲಕ ಔಷಧೋಪಚಾರದಲ್ಲಿ ಇದ್ದಾನೆ’’ ಎಂದು ಬನ್ಸಾಲ್ ತಿಳಿಸಿದ್ದಾರೆ. ಕೊರೋನ ಚಿಕಿತ್ಸೆಯಲ್ಲಿ ಸ್ಟಿರಾಯ್ಡಿ ಅನ್ನು ವಿವೇಚನಾರಹಿತವಾಗಿ ಬಳಸುವುದರಿಂದ ಜನರು ಈ ಶಿಲೀಂಧ್ರ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ‘‘ಸ್ಟಿರಾಯ್ಡ್ ಬಳಕೆ ಕಾರಣವಾಗಿರಬಹುದು. ಆದರೆ, ಅದು ಮಾತ್ರ ಎಂದು ನಾನು ಭಾವಿಸಲಾರೆ. ಕೊರೋನ ವೈರಸ್ಗಳು ದೇಹಕ್ಕೆ ಅತಿ ಮುಖ್ಯವಾದ ಲಿಂಫೋಸೈಟ್ (ಹಲವು ವಿಭಿನ್ನ ಬಿಳಿ ರಕ್ತಕಣಗಳಲ್ಲಿ ಒಂದು)ಗಳನ್ನು ನಾಶ ಮಾಡುತ್ತವೆೆ ಹಾಗೂ ರೋಗಕಾರಕಗಳಿಗೆ ತುತ್ತಾಗುವಂತೆ ಮಾಡುತ್ತದೆ’’ ಎಂದು ಡಾ. ಅಭಿಶೇಕ್ ಬನ್ಸಾಲ್ ಹೇಳಿದ್ದಾರೆ.
ಮಕ್ಕಳು ಕೊರೋನ ವಿರುದ್ಧದ ರೋಗನಿರೋಧಕ ಶಕ್ತಿ ಹೊಂದಿದ್ದಾರೆ ಎಂದು ಈ ಹಿಂದೆ ನಾವು ಭಾವಿಸಿದ್ದೆವು. ಆದರೆ, ಈಗ ನಾವು ಸತ್ಯವನ್ನು ಎದುರಿಸಬೇಕಾಗಿದೆ. ಮಕ್ಕಳಲ್ಲಿ ಕಪ್ಪು ಶಿಲೀಂಧ್ರ ಅಭಿವೃದ್ಧಿಯಾಗುವ ಸಾಧ್ಯತೆ ಇದೆ. ಆದುದರಿಂದ ಮಕ್ಕಳು ಕೊರೋನ ವೈರಸ್ನ ಸೋಂಕಿಗೆ ಒಳಗಾಗದಂತೆ ಸಂರಕ್ಷಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾನು ಹೆತ್ತವರಿಗೆ ಸಲಹೆ ನೀಡುತ್ತೇನೆ ಎಂದು ಬನ್ಸಾಲ್ ಹೇಳಿದ್ದಾರೆ.







