ಕೋವಿಡ್ ನಿಯಮ ಉಲ್ಲಂಘನೆ; ಉಡುಪಿ ಜಿಲ್ಲೆಯಲ್ಲಿ 61 ವಾಹನಗಳು ವಶಕ್ಕೆ: 10 ಪ್ರಕರಣ ದಾಖಲು

ಉಡುಪಿ, ಮೇ 22: ಉಡುಪಿ ಜಿಲ್ಲೆಯಾದ್ಯಂತ ಬಿಗಿ ತಾಪಸಣೆ ಮುಂದು ವರೆಸಿರುವ ಪೊಲೀಸರು, ಇಂದು ಅನಗತ್ಯವಾಗಿ ಸಂಚರಿಸುತ್ತಿದ್ದ 52 ದ್ವಿಚಕ್ರ ವಾಹನ, ಮೂರು ರಿಕ್ಷಾ, ಆರು ಕಾರು ಸೇರಿದಂತೆ ಒಟ್ಟು 61 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಉಡುಪಿ ಉಪವಿಭಾಗದಲ್ಲಿ 7 ಬೈಕ್, ನಾಲ್ಕು ಕಾರು, ಕಾರ್ಕಳದಲ್ಲಿ 16 ಬೈಕ್, ಒಂದು ಕಾರು, ಕುಂದಾಪುರದಲ್ಲಿ 29 ಬೈಕ್, ಮೂರು ರಿಕ್ಷಾ ಹಾಗೂ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಅದೇ ರೀತಿ ಕೋವಿಡ್ ನಿಯಮ ಉಲ್ಲಂಘನೆ ಸಂಬಂಧ ಉಡುಪಿ-8, ಕಾರ್ಕಳ ಮತ್ತು ಕುಂದಾಪುರದಲ್ಲಿ ತಲಾ ಒಂದರಂತೆ ಒಟ್ಟು 10 ಪ್ರಕರಣಗಳು ದಾಖಲಾಗಿವೆ.
ಬೆಳಗ್ಗೆ 10ಗಂಟೆಯವರೆಗೆ ಬೈಂದೂರು, ಕುಂದಾಪುರ, ಉಡುಪಿ ನಗರ, ಮಲ್ಪೆ, ಕಾಪು ಸೇರಿದಂತೆ ಜಿಲ್ಲೆಯ ವಿವಿಧೆಡೆ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ಕಟ್ಟು ನಿಟ್ಟಾಗಿ ವಾಹನಗಳ ತಪಾಸಣೆ ನಡೆಸಿದ್ದು, ಕಾರಣ ಇಲ್ಲದೆ ಸಂಚರಿಸುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದುಕೊಂಡರು. ಪೊಲೀಸರು ಬಿಗಿ ಕ್ರಮದ ಪರಿ ಣಾಮ ಬೆಳಗ್ಗೆ 10ಗಂಟೆಯ ನಂತರ ಅಗತ್ಯ ವಾಹನಗಳನ್ನು ಬಿಟ್ಟರೆ ಬೇರೆ ಯಾವುದೇ ವಾಹನಗಳು ಓಡಾಟ ನಡೆಸುತ್ತಿರಲಿಲ್ಲ.
ಅದೇ ರೀತಿ ಬೈಂದೂರು ಪೇಟೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್ ಸಂಚರಿಸಿ ಅಂಗಡಿಗಳಲ್ಲಿ ನಿಯಮ ಪಾಲನೆ ಬಗ್ಗೆ ಪರಿಶೀಲನೆ ನಡೆಸಿದರು. ಹೂವಿನ ಅಂಗಡಿ, ಬೇಕರಿ ಅಂಗಡಿಯನ್ನು ಮುಚ್ಚಲು ಸೂಚನೆ ನೀಡಿದರು. ಅದೇ ರೀತಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಕರಾವಳಿ ಬೈಪಾಸ್, ಸಂತೆಕಟ್ಟೆ, ಬಾರಕೂರು, ಬ್ರಹ್ಮಾವರಗಳಲ್ಲಿ ವಾಹನಗಳ ಪರಿಶೀಲನೆ ನಡೆಸಿದರು.







