ನೈಜೀರಿಯ: ವಿಮಾನ ಪತನ; ಸೇನಾ ಮುಖ್ಯಸ್ಥ, 10 ಸೇನಾಧಿಕಾರಿಗಳ ಸಾವು

photo :twitter.com/FTSEntertain
ಅಬುಜ (ನೈಜೀರಿಯ), ಮೇ 22: ನೈಜೀರಿಯದ ಸೇನಾಧಿಕಾರಿಗಳು ಪ್ರಯಾಣಿಸುತ್ತಿದ್ದ ವಿಮಾನವೊಂದು ಶುಕ್ರವಾರ ಪತನಗೊಂಡಿದ್ದು, ದೇಶದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಬ್ರಾಹೀಮ್ ಅತ್ತಾಹಿರು ಮತ್ತು ಇತರ ಸೇನಾಧಿಕಾರಿಗಳು ಮೃತಪಟ್ಟಿದ್ದಾರೆ.
ಹವಾಮಾನ ವೈಪರೀತ್ಯದ ಕಾರಣದಿಂದ ವಿಮಾನವು ಕಡುನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಸೇನೆ ಹೇಳಿಕೆಯೊಂದರಲ್ಲಿ ತಿಳಿಸಿದೆ. ಅಪಘಾತದಲ್ಲಿ ವಿಮಾನ ಸಿಬ್ಬಂದಿ ಮತ್ತು ಇತರ ಸೇನಾಧಿಕಾರಿಗಳು ಸೇರಿದಂತೆ ಒಟ್ಟು 11 ಮಂದಿ ಮೃತಪಟ್ಟಿದ್ದಾರೆ ಎಂದು ಅದು ಹೇಳಿದೆ. ಅಪಘಾತಕ್ಕೆ ಕಾರಣವನ್ನು ಅದು ತಿಳಿಸಿಲ್ಲ.
ಲೆಫ್ಟಿನೆಂಟ್ ಜನರಲ್ ಅತ್ತಾಹಿರು ಅವರನ್ನು ದೇಶದ ಅಧ್ಯಕ್ಷ ಮುಹಮ್ಮದು ಬುಹಾರಿ ಜನವರಿಯಲ್ಲಿ ಸೇನಾ ಮುಖ್ಯಸ್ಥರನ್ನಾಗಿ ನೇಮಿಸಿದ್ದರು. ದೇಶದಲ್ಲಿ ಹೆಚ್ಚುತ್ತಿರುವ ಹಿಂಸೆಯನ್ನು ನಿಗ್ರಹಿಸುವುದಕ್ಕಾಗಿ ಉನ್ನತ ಸೇನಾವಲಯದಲ್ಲಿ ಹಲವು ಬದಲಾವಣೆಗಳನ್ನು ಅಂದು ಮಾಡಲಾಗಿತ್ತು.
Next Story





