ಮೇ 24ರಂದು ಕೇಂದ್ರ-ರಾಜ್ಯ ಸರಕಾರಗಳ ವೈಫಲ್ಯ ಖಂಡಿಸಿ ವೆಲ್ಫೇರ್ ಪಾರ್ಟಿ ಪ್ರತಿಭಟನೆ
ಬೆಂಗಳೂರು, ಮೇ 22: ಕೋವಿಡ್ ಸಂಕ್ರಮಣ ಕಾಲವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ವಿಫಲವಾಗಿವೆ. ಜನ ವಿರೋಧಿ ನಿಯಮಗಳನ್ನು ಜಾರಿಗೆ ತಂದಿರುವ ರಾಜ್ಯ ಮತ್ತು ಕೇಂದ್ರ ಸರಕಾರಗಳ ವಿರುದ್ಧ ಮೇ 24ರಂದು ಜನಾಗ್ರಹ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹೀರ್ ಹುಸೇನ್ ತಿಳಿಸಿದ್ದಾರೆ.
ನಾವು ಬದುಕಬೇಕು ಎನ್ನುವ ನಿಟ್ಟಿನಲ್ಲಿ ರಾಜ್ಯವ್ಯಾಪಿ ಪಕ್ಷಾತೀತವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸೋಂಕಿನಿಂದ ಬಳಲುತ್ತಿರುವ ಎಲ್ಲರಿಗೂ ಸರಕಾರ ಉಚಿತ ಚಿಕಿತ್ಸೆ ಕೊಡಬೇಕು. ದೇಶದ ಎಲ್ಲ ನಾಗರಿಕರಿಗೆ ಉಚಿತವಾಗಿ ಲಸಿಕೆ ಹಾಕಬೇಕು. ಸರಕಾರ ನೆಪಮಾತ್ರಕ್ಕೆ ಜನರಿಗೆ ಕಣ್ಣೊರೆಸುವ ತಂತ್ರ ಮಾಡಿ ಕೇವಲ 2000-3000 ರೂಪಾಯಿಗಳನ್ನು ಘೋಷಣೆ ಮಾಡಿದ್ದು ವಿಪರ್ಯಾಸ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಘೋಷಣೆ ಮಾಡಿದ ಹಣವೇ ಇನ್ನೂ ಸರಿಯಾಗಿ ತಲುಪಿಲ್ಲ. ಕಾಟಾಚಾರದ ಘೋಷಣೆ ಮಾಡಿರುವುದನ್ನು ಬಿಟ್ಟು ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಎಲ್ಲರಿಗೂ ಸ್ಪಷ್ಟವಾಗಿ ಯೋಜನೆ ರೂಪಿಸಬೇಕು. ಗ್ರಾಮೀಣ ಮಟ್ಟಕ್ಕೆ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಗ್ರಾಮಪಂಚಾಯತಿ ಮಟ್ಟದಲ್ಲಿ ಆರಂಭ ಮಾಡಿ ಜನರ ಆರೋಗ್ಯದ ಕಾಳಜಿ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಶಿಕ್ಷಕರು, ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಲವು ತಿಂಗಳುಗಳಿಂದ ಸಂಬಳವಿಲ್ಲದೆ ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ. ನ್ಯಾಯವಾದಿಗಳು, ಪತ್ರಕರ್ತರು ಸಂಕಷ್ಟದಲ್ಲಿದ್ದಾರೆ. ಎಲ್ಲರಿಗೂ ಅವರವರ ಸಮಸ್ಯೆಗಳನ್ನರಿತು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಈಗಾಗಲೇ ಘೋಷಣೆ ಮಾಡಿರುವ ಅಲ್ಪಮೊತ್ತದ ಪ್ಯಾಕೇಜ್ ಅವೈಜ್ಞಾನಿಕವಾಗಿದೆ. 2000-3000 ರೂಪಾಯಿಯಲ್ಲಿ ಜೀವನ ನಿರ್ವಹಣೆ ಕಷ್ಟಸಾಧ್ಯ ಎಂದು ಅವರು ಹೇಳಿದ್ದಾರೆ.
ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸದ ಸರಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಮೇ 24 ರಂದು ರಾಜ್ಯಾದ್ಯಂತ ಪ್ರತಿಭಟನೆ ಮೂಲಕ ಸರಕಾರದ ಗಮನ ಸೆಳೆಯಲು ನಿರ್ಧರಿಸಲಾಗಿದೆ. ಇದಕ್ಕೆ ಬೆಂಬಲ ನೀಡಲು ಜನರು ತಮ್ಮ ತಮ್ಮ ಮನೆಗಳಲ್ಲಿ ಅಥವಾ ಆಯಕಟ್ಟಿನ ಸ್ಥಳಗಳಲ್ಲಿ ಜಮಾಯಿಸಿ ಖಾಲಿ ತಟ್ಟೆ ಹಾಗೂ ಖಾಲಿ ಚೀಲದೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಾಹೀರ್ ಹುಸೇನ್ ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.







