ಮಂಗಳೂರಿನ ಆರೋಗ್ಯ ಕೇಂದ್ರಗಳನ್ನು ಬಿಜೆಪಿ ಕಚೇರಿಗಳನ್ನಾಗಿ ಮಾಡಿದ ಶಾಸಕ: ಎಸಿ ವಿನಯರಾಜ್ ಆರೋಪ

ಮಂಗಳೂರು, ಮೇ 22: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಎಲ್ಲಾ ಪ್ರಾಥಮಿಕ ಹಾಗೂ ನಗರ ಆರೋಗ್ಯ ಕೇಂದ್ರಗಳನ್ನು ಸ್ಥಳೀಯ ಶಾಸಕ ವೇದವ್ಯಾಸ್ ಕಾಮತ್ ಬಿಜೆಪಿ ಪಕ್ಷದ ಕಚೇರಿಗಳನ್ನಾಗಿ ಮಾರ್ಪಡಿಸಿದ್ದಾರೆ ಎಂದು ಮನಪಾ ವಿಪಕ್ಷ ನಾಯಕ ಎ.ಸಿ.ವಿನಯರಾಜ್ ಆರೋಪಿಸಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಲಸಿಕೆ ಟೋಕನ್‌ಗಳನ್ನು ಶಾಸಕ ವೇದವ್ಯಾಸ್ ಕಾಮತ್‌ರ ಬೆಂಬಲಿಗರು ಮತ್ತು ಬಿಜೆಪಿಯ ಕಾರ್ಪೊರೇಟರ್‌ಗಳು ಬೇಕಾಬಿಟ್ಟಿ ನೀಡುವ ಮೂಲಕ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸುತ್ತಿದ್ದಾರೆ. ಜಿಲ್ಲಾ ಆರೋಗ್ಯ ಅಧಿಕಾರಿಗಳ ಗಮನಕ್ಕೆ ಈ ವಿಷಯ ತಂದರೂ ಯಾವುದೇ ಕ್ರಮ ಜರಗಿಸಿಲ್ಲ. ಅವರು ಬಿಜೆಪಿ ಏಜಂಟರಂತೆ ವರ್ತಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ನಾಪತ್ತೆ ಆಗಿದ್ದಾರೆ ಎಂದು ಎಸಿ ವಿನಯರಾಜ್ ಆಪಾದಿಸಿದರು.
ಆರ್ಥಿಕವಾಗಿ ಹಿಂದುಳಿದ ಜಿಲ್ಲೆಯ ಜನತೆಗೆ ಆರ್ಥಿಕ ಪ್ಯಾಕೇಜ್ ಕೊಡಿಸುವ ಬದಲು ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷದ ಮೇಲೆ ಸುಳ್ಳಾರೋಪ ಹೊರಿಸುತ್ತಿರುವುದು ಖಂಡನೀಯ ಎಂದರು.
ಕೋವಿಡ್-19 ಒಂದನೇ ಮತ್ತು ಎರಡನೇ ಅಲೆಯನ್ನು ತಡೆಯುವಲ್ಲಿ ವಿಫಲವಾದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಕಾಂಗ್ರೆಸ್ ವಿರುದ್ಧ ನಕಲಿ ಟೂಲ್‌ಕಿಟ್ ಷಡ್ಯಂತ್ರ ನಡೆಸಿದೆ ಎಂದು ಆಪಾದಿಸಿದ ಅವರು ಮೋದಿ ಹೊರತುಪಡಿಸಿ ಭಾರತದ ಯಾವೊಬ್ಬ ಪ್ರಧಾನಿಯೂ ವಿಪಕ್ಷದ ವಿರುದ್ಧ ವಿದೇಶಗಳಲ್ಲಿ ಆರೋಪ ಮಾಡಿದ ಚರಿತ್ರೆ ಇಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ವಿಶ್ವಾಸ್ ಕುಮಾರ್ ದಾಸ್, ಮಹಾಬಲ ಮಾರ್ಲ, ಶಾಹುಲ್ ಹಮೀದ್, ಮನಪ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ಅನಿಲ್ ಪೂಜಾರಿ, ಪ್ರಕಾಶ್ ಬಿ. ಸಾಲ್ಯಾನ್, ಶಭೋದಯ ಆಳ್ವ, ಅಪ್ಪಿ, ಸಂಶುದ್ದೀನ್, ಆರೀಫ್ ಬಾವಾ, ಯೋಗೀಶ್ ಕುಮಾರ್ ಉಪಸ್ಥಿತರಿದ್ದರು.







