ವಿಫಲ ರಾಜ್ಯವಾಗಿರುವ ಯುಪಿ ಇದೀಗ ಅರಾಜಕತೆಯಿಂದ ಬಳಲುತ್ತಿದೆ: ಎಸ್‍ಡಿಪಿಐ
ಬೆಂಗಳೂರು, ಮೇ 22: ಉತ್ತರ ಪ್ರದೇಶದ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರವು ಕೋವಿಡ್ ಎರಡನೇ ಅಲೆಯನ್ನು ಎದುರಿಸಲು ಸಂಪೂರ್ಣವಾಗಿ ವಿಫಲವಾದ ಕಾರಣ ರಾಜ್ಯದಲ್ಲಿ ಭೀಕರ ಪರಿಸ್ಥಿತಿ ತಲೆದೋರಿದ್ದು, ಲೆಕ್ಕವಿಲ್ಲದಷ್ಟು ಸಾವು ನೋವುಗಳಿಗೆ ಕಾರಣವಾಗಿದೆ ಎಂದು ಎಸ್‍ಡಿಪಿಐ ಉಪಾಧ್ಯಕ್ಷ ಅಡ್ವೊಕೇಟ್ ಶರ್ಫುದ್ದೀನ್ ಅಹ್ಮದ್ ಆರೋಪಿಸಿದ್ದಾರೆ.
ವಾರಸುದಾರರಿಲ್ಲದ ಅದೆಷ್ಟೋ ಮೃತದೇಹಗಳು ನದಿಯಲ್ಲಿ ತೇಲಿ ಬರುತ್ತಿವೆ ಅಥವಾ ನದಿಯ ದಡದಲ್ಲಿ ಸಮಾಧಿ ಮಾಡಲಾಗುತ್ತಿದೆ. ಆಮ್ಲಜನಕದ ಕೊರತೆಯಿಂದ ದುರಂತಮಯ ಪರಿಸ್ಥಿತಿ ಉಂಟಾಗಿದ್ದು, ಹಲವು ಸಾವು-ನೋವು ಸಂಭವಿಸಿದೆ. ಆರೋಗ್ಯ ಕ್ಷೇತ್ರದ ಅತ್ಯಂತ ಕರುಣಾಜನಕ ಸನ್ನಿವೇಶಗಳು ಜನರನ್ನು ಭಯಭೀತರನ್ನಾಗಿ ಮಾಡಿದೆ. ಕಾನೂನುಬಾಹಿರ ಮತ್ತು ಅರಾಜಕ ಪರಿಸ್ಥಿತಿಯು ಉತ್ತರಪ್ರದೇಶದಲ್ಲಿ ಭಯಾನಕ ಪರಿಸ್ಥಿತಿಗಳನ್ನು ಸೃಷ್ಟಿಸಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮೇ 17ರಂದು ಬಾರಬಂಕಿ ಪೊಲೀಸರು ಶತಮಾನದ ಇತಿಹಾಸವಿರುವ ಮಸೀದಿಯನ್ನು ಧ್ವಂಸಗೊಳಿಸಿದ್ದಾರೆ. ಮಾತ್ರವಲ್ಲ ಅದರ ಅವಶೇಷಗಳನ್ನು ನದಿಗೆ ಎಸೆದಿದ್ದಾರೆ. ಮೇ 31 ರವರೆಗೆ ಕಟ್ಟಡಕ್ಕೆ ಹಾನಿ ಮಾಡುವುದಾಗಲೀ, ಕೆಡವುದಾಗಲೀ ಮಾಡಬಾರದು ಎಂಬ ಹೈಕೋರ್ಟ್‍ನ ಕಡ್ಡಾಯ ನಿರ್ದೇಶನವನ್ನು ಕಡೆಗಣಿಸಿ ಮಸೀದಿಯನ್ನು ಧ್ವಂಸಗೊಳಿಸಲಾಗಿದೆ. ಹೈಕೋರ್ಟ್‍ನ ಆದೇಶಕ್ಕೆ ಯಾವುದೇ ಗೌರವ ನೀಡದೆ ಜಿಲ್ಲಾ ಅಧಿಕಾರಿಗಳು ಮಸೀದಿಯನ್ನು ಧ್ವಂಸಗೈದಿದ್ದಾರೆ ಎಂದು ಶರ್ಫುದ್ದೀನ್ ಆರೋಪಿಸಿದ್ದಾರೆ.
ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಲು ಮತ್ತು ಪ್ರತಿಪಕ್ಷಗಳನ್ನು ಹತ್ತಿಕ್ಕಲು ಉತ್ತರಪ್ರದೇಶ ಸರಕಾರ ಕಾನೂನು ಸುವ್ಯವಸ್ಥೆ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಈ ಅನ್ಯಾಯ ಮತ್ತು ಧಮಾರ್ಂಧತೆಯ ವಿರುದ್ಧ ಪ್ರತಿಭಟಿಸಿದ ಜನರನ್ನು ಈಗ ಪೊಲೀಸರು ಬಂಧಿಸಿದ್ದಾರೆ ಎಂದು ಅವರು ಕಿಡಿಗಾರಿದ್ದಾರೆ.
ರಾಜ್ಯದಲ್ಲಿ ಪೊಲೀಸ್ ಇಲಾಖೆಯನ್ನು ರಾಜಕೀಯಗೊಳಿಸಲಾಗುತ್ತಿದ್ದು, ಇದರ ಪರಿಣಾಮವಾಗಿ ಉನ್ನಾವೊದ ಬೆಂಗರ್ ಮೌ ಎಂಬಲ್ಲಿ ಫೈಸಲ್ ಎಂಬ ಯುವಕನನ್ನು ಹತ್ಯೆ ಮಾಡಿದ ಘಟನೆ ನಡೆದಿದೆ. ಮೊದಲಿನಿಂದಲೂ ಆದಿತ್ಯನಾಥ್ ಅಧಿಕಾರಾವಧಿಯಲ್ಲಿ ಸಾರ್ವಜನಿಕ ಕರ್ತವ್ಯವನ್ನು ನಿರ್ವಹಿಸುವಲ್ಲಿ ಪೊಲೀಸರು ಅಸಹ್ಯ ಹುಟ್ಟಿಸುವಂತಹ ಕೃತ್ಯದಲ್ಲಿ ತೊಡಗಿದ್ದಾರೆ. ಪೊಲೀಸರ ಈ ದುಷ್ಕೃತ್ಯಗಳ ವಿರುದ್ಧ ಎಸ್‍ಡಿಪಿಐ ಕಾನೂನು ಹೋರಾಟವನ್ನು ಪ್ರಾರಂಭಿಸಿದೆ ಎಂದು ಶರ್ಫುದ್ದೀನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.







