ಕೊಲೆ ಪ್ರಕರಣದಲ್ಲಿ ಕುಸ್ತಿಪಟು ಸುಶೀಲ್ ಕುಮಾರ್ ಬಂಧನ: ವರದಿ

ಹೊಸದಿಲ್ಲಿ: ಛತ್ರಸಲ್ ಸ್ಟೇಡಿಯಂನಲ್ಲಿ ನಡೆದ ಗಲಾಟೆ ಕುಸ್ತಿಪಟುವಿನ ಸಾವಿಗೆ ಕಾರಣವಾಗಿರುವ ಘಟನೆಗೆ ಸಂಬಂಧಿಸಿದಂತೆ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಪಂಜಾಬ್‌ನಲ್ಲಿ ಶನಿವಾರ ಬಂಧಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಘಟನೆಯ ಬಳಿಕ ಪರಾರಿಯಾಗಿರುವ ಕುಮಾರ್ ಅವರನ್ನು ಜಲಂಧರ್ ಸಮೀಪ ಬಂಧಿಸಲಾಗಿದೆ. ಪ್ರಕರಣದಲ್ಲಿ ಆರೋಪಿಯಾಗಿರುವ ಕುಮಾರ್ ಸಹಚರ ಅಜಯ್ ಕುಮಾರ್ ನನ್ನು ಕೂಡ ಬಂಧಿಸಲಾಗಿದೆ ಎಂದು ಸುದ್ದಿಸಂಸ್ಥೆ IANS ಗೆ ಮೂಲಗಳು ತಿಳಿಸಿವೆ.
ಕುಮಾರ್ ಅವರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದು, ಅವರನ್ನು ದಿಲ್ಲಿ ಪೋಲಿಸ್‌ಗೆ ಹಸ್ತಾಂತರಿಸಲಾಗುತ್ತದೆ.
ವ್ಯಕ್ತಿಗತ ಕ್ರೀಡೆಯಲ್ಲಿ ಎರಡು ಒಲಿಂಪಿಕ್ಸ್ ಪದಕಗಳನ್ನು ಗೆದ್ದ ಏಕೈಕ ಭಾರತೀಯ ಕ್ರೀಡಾಪಟು ವಾಗಿರುವ ಕುಸ್ತಿಪಟು ಕುಮಾರ್ ಗೆ ನಿರೀಕ್ಷಿತ ಜಾಮೀನು ನೀಡಲು ದಿಲ್ಲಿ ನ್ಯಾಯಾಲಯ ಈ ಹಿಂದೆ ನಿರಾಕರಿಸಿತ್ತು .
ಸುಶೀಲ್ 66 ಕೆಜಿ ವಿಭಾಗದಲ್ಲಿ 2008 ರ ಬೀಜಿಂಗ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕಂಚು ಹಾಗೂ 2012 ರ ಲಂಡನ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದಿದ್ದರು.