ಕೊರೋನ ಗಂಭೀರತೆ ಬಗ್ಗೆ ಟ್ರಾಫಿಕ್ ಎಎಸ್‌ಐ ಡೊಂಬಯ್ಯರಿಂದ ಜಾಗೃತಿ

ಮಂಗಳೂರು, ಮೇ 22: ನಗರದ ಪೂರ್ವ ಸಂಚಾರಿ ಪೊಲೀಸ್ ಠಾಣೆ ಟ್ರಾಫಿಕ್ ಎಎಸ್‌ಐ ಡೊಂಬಯ್ಯ ದೇವಾಡಿಗ ಅವರು ಕೋವಿಡ್‌ನಿಂದ ತನ್ನ ಕುಟುಂಬ ಸದಸ್ಯನನ್ನು ಕಳೆದುಕೊಂಡರೂ ಕೋವಿಡ್ ವಾರಿಯರ್ ಆಗಿ ಸೇವೆ ಸಲ್ಲಿಸಿ ಯುವಜನರಲ್ಲಿ ಜನಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ.
ಡೊಂಬಯ್ಯ ಅವರ ಅಣ್ಣನ ಮಗ ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿದ್ದು, ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಪ್ರಾರಂಭಿಕ ಹಂತದಲ್ಲಿ ನಿರ್ಲಕ್ಷ್ಯ ಮಾಡಿದ ಪರಿಣಾಮ ಸೋಂಕು ಬಿಗಡಾಯಿಸಿ ಬಳಿಕ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ರೋಗ ಉಲ್ಬಣಗೊಂಡು ಬಳಿಕ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ದಾಖಲಾದ ಎರಡನೇ ದಿನದಲ್ಲೇ ಚಿಕಿತ್ಸೆಗೆ ಸ್ಪಂದಿಸದೆ ಇತ್ತೀಚೆಗೆ ಮೃತಪಟ್ಟಿದ್ದರು.
ಕುಟುಂಬ ಸದಸ್ಯನನ್ನು ಕಳೆದುಕೊಂಡ ದುಃಖ ಇನ್ನೂ ಡೊಂಬಯ್ಯ ಅವರಲ್ಲಿ ಮಡುಗಟ್ಟಿರುವುದು ಅವರ ಮಾತಿನಿಂದಲೇ ಸ್ಪಷ್ಟವಾಗುತ್ತಿತ್ತು. ‘ಕೋವಿಡ್ ನಾವು ಯೋಚನೆ ಮಾಡಿದ ಹಾಗೆ ಇಲ್ಲ ಎನ್ನುವುದನ್ನು ನಾವು ಪ್ರತ್ಯಕ್ಷ ಕಾಣುತ್ತಿದ್ದೇವೆ. ಅದೆಷ್ಟೋ ಕುಟುಂಬಗಳು ಇದಕ್ಕೆ ಬಲಿಪಶು ಆಗಿವೆ. ಇನ್ನಾದರೂ ಯುವಜನತೆ ಗಂಭೀರವಾಗಿ ಪರಿಗಣಿಸಿ ವಿನಾಕಾರಣ ಸುತ್ತಾಟ ನಿಲ್ಲಿಸಬೇಕು’ ಎಂದು ಹೇಳಿದರು.
ತನ್ನ ನಿವೃತ್ತಿಗೆ ಇನ್ನು 6 ತಿಂಗಳು ಬಾಕಿಯಿದ್ದರೂ ತನ್ನ ಆರೋಗ್ಯದ ಬಗ್ಗೆ ಚಿಂತೆ ಮಾಡದೆ ನಗರದಲ್ಲಿ ನಾಕಾಬಂಧಿ ಹಾಕಿ ‘ಯುವ ಜನರಲ್ಲಿ ಕೋವಿಡ್ ಸೋಂಕು’ ಬಗ್ಗೆ ಜಾಗೃತಿಯನ್ನು ಡೊಂಬಯ್ಯ ಮೂಡಿಸುತ್ತಿದ್ದಾರೆ.








.jpeg)


