ವಿಮಾನದ ಮೂಲಕ ವಿದೇಶಕ್ಕೆ ಪ್ರಯಾಣಿಸುವವರಿಗೆ ಕ್ಯುಆರ್ ಕೋಡ್ ಇರುವ ನೆಗೆಟಿವ್ ಆರ್ಟಿ-ಪಿಸಿಆರ್ ವರದಿ ಅಗತ್ಯ

ಹೊಸದಿಲ್ಲಿ, ಮೇ 22: ವಿಮಾನದ ಮೂಲಕ ವಿದೇಶಕ್ಕೆ ಪ್ರಯಾಣಿಸುವರು ಕ್ಯೂ ಆರ್ ಕೋಡ್ ಇರುವ ನೆಗೆಟಿವ್ ಆರ್ಟಿ-ಪಿಸಿಆರ್ ಪರೀಕ್ಷೆ ವರದಿ ಸಲ್ಲಿಸುವ ಅಗತ್ಯತೆ ಇದೆ ಎಂದು ನಾಗರಿಕ ವಿಮಾನ ಯಾನ ಸಚಿವಾಲಯ ಕಳೆದ ವಾರ ಮಾರ್ಗ ಸೂಚಿಗಳನ್ನು ಪ್ರಕಟಿಸಿದೆ. ವಿಮಾನ ಪ್ರಯಾಣಿಕರು ನಕಲಿ ಅಥವಾ ತಿದ್ದಿದ ವರದಿಗಳನ್ನು ಸಲ್ಲಿಸಿದ ಘಟನೆಗಳ ಬಳಿಕ ನೈಜ ಆರ್ಟಿ-ಪಿಸಿಆರ್ ಪರೀಕ್ಷೆ ವರದಿ ಸಲ್ಲಿಸಲು ಸರಕಾರ ಈ ಕ್ರಮಗಳನ್ನು ತೆಗೆದುಕೊಂಡಿದೆ. ಇದು ಭೌತಿಕ ಸಂಪರ್ಕವನ್ನು ಇನ್ನಷ್ಟು ಕಡಿತಗೊಳಿಸಲಿದೆ.
‘‘2021 ಮೇ 22ರಂದು 1 ಗಂಟೆ ಬಳಿಕ ಭಾರತದಿಂದ ವಿದೇಶಕ್ಕೆ ತೆರಳಲು ಅಂತಾರಾಷ್ಟ್ರೀಯ ವಿಮಾನ ಏರುವ ಪ್ರಯಾಣಿಕರು ಕ್ಯೂಆರ್ ಕೋಡ್ ಇರುವ ನೆಗೆಟಿವ್ ಆರ್ಟಿ-ಪಿಸಿಆರ್ ಪರೀಕ್ಷೆ ವರದಿಯನ್ನು ತಮ್ಮೆಂದಿಗೆ ಇರಿಸಿಕೊಳ್ಳಬೇಕು. ಅಂತಹ ಪ್ರಯಾಣಿಕರಿಗೆ ಮಾತ್ರ ವಿಮಾನ ಏರಲು ಅನುಮತಿ ನೀಡುವಂತೆ ವಿಮಾನ ಯಾನ ಸಂಸ್ಥೆಗಳಿಗೆ ಸಲಹೆ ನೀಡಲಾಗಿದೆ’’ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಪ್ರಸಕ್ತ ಭಾರತ ಮೇ 31ರ ವರೆಗೆ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದೆ. ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದ ತೀವ್ರ ಸಾಂಕ್ರಾಮಿಕ ಕೊರೋನ ಪ್ರಬೇಧ ಹರಡುವುದನ್ನು ತಡೆಯಲು ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಯುಎಇ ಹಾಗೂ ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳು ಭಾರತದ ವಿಮಾನಗಳಿಗೆ ನಿರ್ಬಂಧ ವಿಧಿಸಿದೆ. ಆದರೆ, ಟ್ರಾವಲ್ ಬಬಲ್ಸ್ ಅಡಿಯಲ್ಲಿ ಹಲವು ದೇಶಗಳಿಗೆ ಭಾರತದ ವಿಮಾನ ಸಂಚಾರ ಮುಂದುವರಿದಿದೆ.





