ದೇಶದಲ್ಲಿ ಸುಮಾರು 9,000 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ: ಕೇಂದ್ರ ಸರಕಾರ

ಹೊಸದಿಲ್ಲಿ, ಮೇ 22: ದೇಶದಲ್ಲಿ 9,000ದಷ್ಟು ಜನರು ಮ್ಯುಕೋರ್ಮೈಕೋಸಿಸ್ ಅಥವಾ ಬ್ಲ್ಯಾಕ್ಫಂಗಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಶನಿವಾರ ಹೇಳಿದ್ದಾರೆ.
ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಈ ಸೋಂಕಿಗೆ ಬಳಸುವ ಆ್ಯಂಫೊಟೆರಿಸಿನ್-ಬಿ ಲಸಿಕೆಯ 23,680 ಹೆಚ್ಚುವರಿ ಸೀಸೆಗಳನ್ನು ಸೋಂಕಿನ ಪ್ರಮಾಣ ಹೆಚ್ಚಿರುವ ರಾಜ್ಯಗಳಿಗೆ ರವಾನಿಸಲಾಗಿದೆ. ದೇಶದಲ್ಲಿ ಈಗ ಸುಮಾರು 8,848 ಬ್ಲ್ಯಾಕ್ಫಂಗಸ್(ಕರಿಶಿಲೀಂಧ್ರ) ಸೋಂಕು ಪ್ರಕರಣ ವರದಿಯಾಗಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ಸಚಿವ ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ. ಅತ್ಯಧಿಕ ಸೋಂಕು ಪ್ರಕರಣ ದಾಖಲಾಗಿರುವ ಗುಜರಾತ್ಗೆ 5,800 ಸೀಸೆ, ಎರಡನೇ ಸ್ಥಾನದಲ್ಲಿರುವ ಮಹಾರಾಷ್ಟ್ರಕ್ಕೆ 5,090 ಸೀಸೆ, ಆಂಧ್ರಪ್ರದೇಶಕ್ಕೆ 2,300 ಸೀಸೆ, ತೆಲಂಗಾಣಕ್ಕೆ 890 ಸೀಸೆ ಲಸಿಕೆ ರವಾನಿಸಲಾಗಿದೆ. ರಾಷ್ಟ್ರೀಯ ರಾಜಧಾನಿ ದಿಲ್ಲಿಯಲ್ಲಿ 197 ಪ್ರಕರಣಗಳು ದಾಖಲಾಗಿದ್ದು 670 ಸೀಸೆಗಳನ್ನು ಒದಗಿಸಲಾಗಿದೆ. ಬ್ಲ್ಯಾಕ್ ಫಂಗಸ್ ಸೋಂಕಿನ ವಿರುದ್ಧ ಬಳಸುವ ಲಸಿಕೆಯನ್ನು ತಯಾರಿಸಲು ಕನಿಷ್ಟ 11 ಔಷಧ ಉತ್ಪಾದನಾ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ.