ಮೊಸಳೆಗಳು ಅಮಾಯಕ: ಟ್ವೀಟ್ ಮೂಲಕ ಮೋದಿಯನ್ನು ಕುಟುಕಿದ ರಾಹುಲ್

ಹೊಸದಿಲ್ಲಿ, ಮೇ 23: 'ದೇಶದಲ್ಲಿ ಕೋವಿಡ್ ಲಸಿಕೆ ಕೊರತೆ, ಕನಿಷ್ಠ ಜಿಡಿಪಿ ಜತೆಗೆ ಗರಿಷ್ಠ ಕೋವಿಡ್ ಸಾವಿಗೆ ಸರಕಾರದ ಸ್ಪಂದನವೆಂದರೆ ಅಳುವ ಪ್ರಧಾನಿ' ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ.ಚಿದಂಬರಂ ಮತ್ತು ಜೈರಾಂ ರಮೇಶ್ ಕೂಡಾ ಮೋದಿ ವಿರುದ್ಧದ ವಾಗ್ದಾಳಿಯಲ್ಲಿ ತಮ್ಮ ನಾಯಕನನ್ನು ಅನುಸರಿಸಿದ್ದಾರೆ.
"ಲಸಿಕೆಗಳಿಲ್ಲ. ಕನಿಷ್ಠ ಜಿಡಿಪಿ. ಗರಿಷ್ಠ ಕೋವಿಡ್ ಸಾವುಗಳು... ಭಾರತ ಸರಕಾರದ ಸ್ಪಂದನೆಯೇ? ಪ್ರಧಾನಿ ಅಳುತ್ತಿದ್ದಾರೆ" ಎಂದು ರಾಹುಲ್ ಶುಕ್ರವಾರ ಟ್ವೀಟ್ ಮಾಡಿದ್ದು, ಕೋವಿಡ್-19ನಿಂದ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುವಾಗ ಪ್ರಧಾನಿ ನರೇಂದ್ರ ಮೋದಿ ಮೊಸಳೆ ಕಣ್ಣೀರು ಸುರಿಸಿದ್ದಾರೆ ಎಂದು ಆಪಾದಿಸಿದ್ದಾರೆ.
'ಮೊಸಳೆಗಳು ಅಮಾಯಕರು' ಎಂದು ಕಾಂಗ್ರೆಸ್ ಮುಖಂಡ ಇನ್ನೊಂದು ಟ್ವೀಟ್‌ನಲ್ಲಿ ಕುಟುಕಿದ್ದಾರೆ. ವಾರಣಾಸಿಯ ವೈದ್ಯರ ಜತೆ ಶುಕ್ರವಾರ ಮೋದಿ ಡಿಜಿಟಲ್ ಸಂವಾದದಲ್ಲಿ ಭಾವನಾತ್ಮಕವಾದ್ದನ್ನು ಉಲ್ಲೇಖಿಸಿ ರಾಹುಲ್ ಈ ಟ್ವೀಟ್ ಮಾಡಿದ್ದಾರೆ.
ಜಾಗತಿಕ ಆರ್ಥಿಕ ಸ್ಥಿತಿ ಮತ್ತು ಸಾಂಕ್ರಾಮಿಕ ಪರಿಸ್ಥಿತಿ ಬಗ್ಗೆ ಕೇಂದ್ರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಮಾಡಿದ ಟ್ವೀಟನ್ನೂ ರಾಹುಲ್ ಶೇರ್ ಮಾಡಿದ್ದಾರೆ. ಬಾಂಗ್ಲಾದೇಶದಲ್ಲಿ ಜಿಡಿಪಿ ಶೇಕಡ 3.8, ಚೀನಾದಲ್ಲಿ 1.9 ಹಾಗೂ ಪಾಕಿಸ್ತಾನದಲ್ಲಿ 0.4ರಷ್ಟಿದ್ದರೆ ಭಾರತದಲ್ಲಿ ಇದು ಋಣಾತ್ಮಕ 8% ಇರುವುದನ್ನು ಈ ಪಟ್ಟಿ ತೋರಿಸುತ್ತದೆ. ಭಾರತದಲ್ಲಿ ಕೋವಿಡ್‌ನಿಂದಾಗಿ ಪ್ರತಿ 10 ಲಕ್ಷ ಮಂದಿಯ ಪೈಕಿ 212 ಮಂದಿ ಮೃತಪಟ್ಟಿದ್ದರೆ, ವಿಯೇಟ್ನಾಂ ಹಾಗೂ ಚೀನಾದಲ್ಲಿ ಈ ಪ್ರಮಾಣ 0.4 ಇರುವುದನ್ನು ಕೂಡಾ ಈ ಚಾರ್ಟ್ ವಿವರಿಸಿದೆ.
"ಮೋದಿ ವ್ಯವಸ್ಥೆಯ ದುರಾಡಳಿತದಿಂದಾಗಿ ಭಾರತಕ್ಕೆ ಕಪ್ಪು ಶಿಲೀಂಧ್ರ ಸಾಂಕ್ರಾಮಿಕವೂ ದಾಳಿ ಮಾಡಿದೆ" ಎಂದು ಇನ್ನೊಂದು ಟ್ವೀಟ್‌ನಲ್ಲಿ ರಾಹುಲ್ ಹೇಳಿದ್ದಾರೆ.
"ದೇಶಕ್ಕೆ ಕೋವಿಡ್ ಲಸಿಕೆ ಬೇಕೇ ವಿನಃ ಮೊಸಳೆ ಕಣ್ಣೀರು ಅಲ್ಲ" ಎಂದು ಜೈರಾಂ ರಮೇಶ್ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ. ನಿಧಾನಗತಿಯ ಲಸಿಕೆ ನೀಡಿಕೆಯ ವಿರುದ್ಧ ಐಎಂಎಫ್ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿರುವುದನ್ನು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಉಲ್ಲೇಖಿಸಿದ್ದಾರೆ.
Crocodiles are innocent.
— Rahul Gandhi (@RahulGandhi) May 22, 2021
मगरमच्छ निर्दोष हैं।