Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಎಂಆರ್‌ಪಿಎಲ್: 172 ಹುದ್ದೆಗಳು...

ಎಂಆರ್‌ಪಿಎಲ್: 172 ಹುದ್ದೆಗಳು ಹೊರರಾಜ್ಯದವರಿಗೆ!

ಕನ್ನಡಿಗರಿಗೆ ಕೇವಲ 12 ಹುದ್ದೆಗಳು ► ಕಂಪೆನಿಯ ಆಡಳಿತದ ವಿರುದ್ಧ ಸ್ಥಳೀಯರ ಆಕ್ರೋಶ

ನವೀನ್ ಸೂರಿಂಜೆನವೀನ್ ಸೂರಿಂಜೆ23 May 2021 9:27 AM IST
share
ಎಂಆರ್‌ಪಿಎಲ್: 172 ಹುದ್ದೆಗಳು ಹೊರರಾಜ್ಯದವರಿಗೆ!

ಮಂಗಳೂರು: ಎಂಆರ್‌ಪಿಎಲ್ 184 ನೇಮಕಾತಿಗಳ ಪೈಕಿ 12 ಹುದ್ದೆಗಳನ್ನು ಮಾತ್ರ ಕನ್ನಡಿಗರಿಗೆ ನೀಡಿ ಉಳಿದ 172 ಉದ್ಯೋಗಗಳನ್ನು ಬೇರೆ ರಾಜ್ಯಗಳಿಗೆ ನೀಡಿದೆ. ಕರಾವಳಿಯ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ ಎಂದು ಮಂಗಳೂರಿನ ಯುವ ಸಮುದಾಯ ಈಗ ಕೇಳಲಾರಂಭಿಸಿದೆ. ಇದು ಒಳ್ಳೆಯದೇ ಆದರೂ ಒಮ್ಮೆ ಹಿಂದಿರುಗಿ ನೋಡಿದರೆ ನಾವು ಮಾಡಿರೋ ತಪ್ಪುಗಳೇನು? ಮುಂದೆ ಕಂಪೆನಿಗಳು ಬಂದಾಗ ನಮ್ಮ ನಿಲುವುಗಳು ಏನಿರಬೇಕು ಎಂಬ ಸ್ಪಷ್ಟತೆಗೆ ಬರಲು ಅನುಕೂಲವಾಗಬಹುದು.

ಅದು 2007ನೇ ಇಸವಿ. ಬರೋಬ್ಬರಿ 14 ವರ್ಷದ ಹಿಂದೆ ಒಎನ್‌ಜಿಸಿ ಮಾಲಕತ್ವದ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ ಲಿಮಿಟೆಡ್ ವಿಸ್ತರಣೆಗೆ ಕಳವಾರು ಪೆರ್ಮುದೆ, ಕುತ್ತೆತ್ತೂರು, ಬಾಳ, ಬಜಪೆ ಗ್ರಾಮಗಳ 1,800 ಎಕರೆ ಕೃಷಿ ಭೂಮಿ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಯಿತು. ಶತಮಾನದ ಇತಿಹಾಸವಿದ್ದ ಕಳವಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಸ್ಥರ ಸಭೆಯನ್ನು ಕೆಐಎಡಿಬಿ ಮತ್ತು ವಿಶೇಷ ಆರ್ಥಿಕ ವಲಯ ಅಧಿಕಾರಿಗಳು ಏರ್ಪಡಿಸಿದ್ದರು. ಭೂಮಿ ನೀಡಿದರೆ ಪರಿಹಾರದ ಜೊತೆಗೆ ಉದ್ಯೋಗ ನೀಡಲಾಗುತ್ತದೆ ಎಂಬುದನ್ನೇ ಉರು ಹೊಡೆದಂತೆ ಅಧಿಕಾರಿಗಳು ಹೇಳುತ್ತಿದ್ದರು. ಯಾವ ಕೆಲಸ? ಎಷ್ಟು ಹುದ್ದೆಗಳು? ವಿದ್ಯಾರ್ಹತೆ ಏನೇನು? ವಿಂಗಡಣೆ ಮಾಡಿದ ಲಿಸ್ಟ್ ಕೊಡಿ ಎಂಬ ಪ್ರಶ್ನೆಗೆ ಅಧಿಕಾರಿಗಳ ಬಳಿ ಉತ್ತರವಿರಲಿಲ್ಲ. ಆಗ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ಜನಪರ, ಜನವಿರೋಧಿ ಪಕ್ಷಗಳೆಲ್ಲವೂ ಸಾರ್ವಜನಿಕ ಸ್ವಾಮ್ಯದ ಕಾರ್ಖಾನೆಗಳು ಬಂದರೆ ಉದ್ಯೋಗಾವಕಾಶ ಸಿಗುತ್ತದೆ. ನಾವು ಬೆಂಬಲಿಸಬೇಕು ಎಂಬ ಧೋರಣೆಯನ್ನೇ ಹೊಂದಿದ್ದವು. ಈಗ 184 ಎಂಆರ್‌ಪಿಎಲ್ ಉದ್ಯೋಗದ ಪೈಕಿ ಕೇವಲ 12 ಉದ್ಯೋಗವನ್ನು ಮಾತ್ರ ಕನ್ನಡಿಗರಿಗೆ ನೀಡಿದ್ದಾರೆ.

ಈ ಪೈಕಿ ದಕ್ಷಿಣಕನ್ನಡಕ್ಕೆ ಹಾಗೂ ಉಡುಪಿ ಜಿಲ್ಲೆಗಳ ತಲಾ ಇಬ್ಬರಿಗೆ ಅವಕಾಶ ದೊರೆತಿದೆ. ಇದೀಗ ತುಳುನಾಡಿನ ಮಂದಿ ಎಚ್ಚರಗೊಂಡಿದ್ದಾರೆ. ಕಳೆದ 15 ವರ್ಷಗಳಿಂದ ಲಕ್ಷಾಂತರ ಉದ್ಯೋಗಗಳು ಪರರಾಜ್ಯದ ಪಾಲಾಗಿವೆ. ಕರಾವಳಿಗರ ಇರೋ ಉದ್ಯೋಗವನ್ನೂ ಎಂಆರ್ ಪಿಎಲ್ ಕಿತ್ತುಕೊಂಡಿದೆ. ಕೇಂದ್ರ ಸರಕಾರದ ಯೋಜನೆಯಾದ ವಿಶೇಷ ಅರ್ಥಿಕ ಯೋಜನೆ ಮಂಗಳೂರಿನಲ್ಲಿ ಜಾರಿಗೊಳಿಸಲು ಮುಂದಾದಾಗ ಯುಪಿಎ ಸರಕಾರ ಅಸ್ತಿತ್ವದಲ್ಲಿತ್ತು. ದಿಲ್ಲಿಯ ಯಾವುದೋ ಸೆಮಿನಾರ್‌ನಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮನಮೋಹನ್ ಸಿಂಗ್ ಹಣವೇನು ಮರದಲ್ಲಿ ಬೆಳೆಯುವುದಿಲ್ಲ ಎಂದಿದ್ದರು. ಮರುದಿನ ‘ವಾರ್ತಾಭಾರತಿ’ ಪತ್ರಿಕೆ ಸಂಪಾದಕೀಯದಲ್ಲಿ ಪ್ರಧಾನಿ ಸಿಂಗ್ ಅವರೇ, ಭಾರತದಲ್ಲಿ ಹಣ ಮರದಲ್ಲೂ ಬೆಳೆಯುತ್ತದೆ. ನೀವು ಬೆಳೆಸಲು ಬಿಡಬೇಕಷ್ಟೆ ಎಂದು ಮಂಗಳೂರು ವಿಶೇಷ ಅರ್ಥಿಕ ವಲಯಕ್ಕಾಗಿ ಸ್ವಾಧೀನಗೊಳ್ಳುತ್ತಿರುವ ಮೂರು ಬೆಳೆ ಬೆಳೆಯುವ ಕೃಷಿ ಭೂಮಿ, ನೆಲಸಮವಾಗಲಿರುವ ತೆಂಗು ಕಂಗು ಸೇರಿದಂತೆ ವಾಣಿಜ್ಯ ಬೆಳೆಗಳನ್ನು ಉಲ್ಲೇಖಿಸಲಾಗಿತ್ತು. ಎಂಆರ್‌ಪಿಎಲ್ ವಿಸ್ತರಣೆಯನ್ನು ಮಂಗಳೂರು ವಿಶೇಷ ಆರ್ಥಿಕ ವಲಯದ ಮೊದಲ ಹಂತದಲ್ಲಿ ಸೇರಿಸಿ 1,800 ಎಕರೆ ಕೃಷಿ ಭೂಮಿಯನ್ನು ಭಾರೀ ವಿರೋಧದ ಮಧ್ಯೆ ಸ್ವಾಧೀನ ಮಾಡಲಾಯಿತು. ದೊಡ್ಡ ದೊಡ್ಡ ಜಮೀನ್ದಾರಿ ಗುತ್ತಿನ ಮನೆಗಳು ಎಂಆರ್‌ಪಿಎಲ್ ಭೂಸ್ವಾಧೀನದ ಜೊತೆ ನಿಂತವು. ರೈತರಾಗಿದ್ದ ಜಮೀನ್ದಾರರು ಕ್ಷಣಾರ್ಧದಲ್ಲಿ ಲಾರಿ, ಜೆಸಿಬಿಗಳ ಮಾಲಕರಾದರು. ತಮ್ಮ ಗದ್ದೆ, ಕೃಷಿ ಭೂಮಿಯನ್ನು ತಾವೇ ನೆಲಸಮ ಮಾಡಲು ಮುಂದಾದರು.

ಆದರೆ ಸಣ್ಣ ಕೃಷಿಕರು ಮಾತ್ರ ಮಂಗಳೂರು ವಿಶೇಷ ಅರ್ಥಿಕ ವಲಯಕ್ಕೆ ವಿರೋಧ ವ್ಯಕ್ತಪಡಿಸಿದರು. ಗುತ್ತು ಬರ್ಕೆ, ಜಮೀನ್ದಾರ ಬ್ರೋಕರ್‌ಗಳೆಲ್ಲಾ ಸೇರಿ ಸಂಯುಕ್ತ ಹಿತರಕ್ಷಣಾ ಸಮಿತಿ ರಚಿಸಿಕೊಂಡರೆ ನಿಜವಾದ ಉಳುಮೆಗಾರರೆಲ್ಲಾ ಸೇರಿ ಕೃಷಿ ಭೂಮಿ ಸಂರಕ್ಷಣಾ ಸಮಿತಿ ರಚಿಸಿಕೊಂಡರು. ವಿದ್ಯಾ ದಿನಕರ್, ನಟೇಶ್ ಉಳ್ಳಾಲ್, ಡಾ.ರಾಮಚಂದ್ರ ಭಟ್ ಮಾರ್ಗದರ್ಶನದ ಉಳುಮೆಗಾರರ ಕೃಷಿ ಭೂಮಿ ಸಂರಕ್ಷಣಾ ಸಮಿತಿಯು ಮೂರು ವರ್ಗಗಳ ಜೊತೆ ಹೋರಾಟ ಮಾಡಬೇಕಾಯಿತು. ಒಂದು ಕಂಪೆನಿ ಮತ್ತದರ ಗೂಂಡಾಗಳು. ಇನ್ನೊಂದೆಡೆ ಕಂಪೆನಿಯ ಜೊತೆ ನಿಂತು ರೈತರಿಗೆ ಹಣ ಉದ್ಯೋಗದ ಆಮಿಷ ತೋರಿಸುತ್ತಿದ್ದ ಜಮೀನ್ದಾರ ಕುಟುಂಬಗಳು, ಮತ್ತೊಂದೆಡೆ ಸಾರ್ವಜನಿಕ ಸ್ವಾಮ್ಯದ ಕಂಪೆನಿಗಳು ಬೇಕು ಎನ್ನುತ್ತಿದ್ದ ಪಕ್ಷಗಳು. ಈ ಮೂರು ವರ್ಗಗಳು ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಮೇಲೆ ಮುಗಿಬಿದ್ದವು. 1,800 ಎಕರೆ ಮೂರು ಬೆಳೆ ಬೆಳೆಯುವ ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. 1,800 ಎಕರೆ ಭೂಸ್ವಾಧೀನದ ಬಳಿಕ 2,035 ಎಕರೆ ಮೂರು ಬೆಳೆ ಬೆಳೆಯುವ ಫಲವತ್ತಾದ ಕೃಷಿ ಭೂಮಿಗೆ ಅಧಿಸೂಚನೆ ಮಾಡಲಾಯಿತು. ಆದರೆ 2,035 ಎಕರೆಯನ್ನು ಭಾರೀ ಹೋರಾಟದಿಂದ ಉಳಿಸಲಾಯಿತು. ಯಾವ ಪಕ್ಷಗಳು, ಯಾವ ಪಂಥ, ಸಿದ್ಧಾಂತಗಳು ನೆರವಿಗೆ ಬಾರದೆ ರೈತರೇ ಖುದ್ದು ಬೀದಿಗಿಳಿದು ಹೋರಾಟ ನಡೆಸಿದರು. ಹಿಂದುತ್ವವಾದಿ ಪೇಜಾವರ ಸ್ವಾಮೀಜಿಯೂ ಇದ್ದರು, ಮುಸ್ಲಿಂ ಸಂಘಟನೆಯ ಮಹಮ್ಮದ್ ಕುಂಞಿಯೂ ಬೆಂಬಲವಾಗಿದ್ದರು. ಅಲ್ಲದೆ ಸಂತ್ರಸ್ತಪರ ಹೋರಾಟಗಾರರಾದ ವಿದ್ಯಾದಿನಕರ್, ಹೇಮಾ ಭಟ್, ರಘು, ಅಣ್ಣಪ್ಪ, ಲಾರೆನ್ಸ್, ವಿಲಿಯಂ, ಶಬೀರ್ ಮೇಲೆ ದಾಳಿ, ಹಲ್ಲೆ, ಠಾಣೆ, ಕೋರ್ಟ್, ಕೇಸು ಎಂದು ಅಲೆದಾಡುವುದರ ಜೊತೆಗೆ ನಡೆದ ಪ್ರತಿಭಟನೆಗಳ ಫಲವಾಗಿ 2,035 ಎಕರೆ ಕೃಷಿ ಭೂಮಿಯನ್ನು ಭೂಸ್ವಾಧೀನತೆಯಿಂದ ಕೈ ಬಿಡಲಾಗಿದೆ. ಈಗಲು 2,035 ಎಕರೆ ಕೃಷಿ ಭೂಮಿ ವ್ಯಾಪ್ತಿಯ ಪೆರ್ಮುದೆ, ಎಕ್ಕಾರಿನಲ್ಲಿ ಜನ ಮೂರು ಬೆಳೆಯನ್ನೂ ಬೆಳೆಯುತ್ತಾರೆ. ವಾಣಿಜ್ಯ ಬೆಳೆಗಳೂ ಆದಾಯ ತಂದು ಕೊಡುತ್ತಿದೆ. ಮಲ್ಲಿಗೆ, ಹಣ್ಣುಗಳು, ತರಕಾರಿ, ತೆಂಗು, ಕಂಗು ಜೊತೆಗೆ ಇಲ್ಲಿನ ಕೃಷಿಕರು ಲಾಭದಾಯಕ ಹೈನುಗಾರಿಕೆ ಮಾಡುತ್ತಿದ್ದಾರೆ.

ಎಂಆರ್‌ಪಿಎಲ್ ವಿಸ್ತರಣೆಗೆ (SEZ) ಗೆ ಭೂಮಿ ಕೊಟ್ಟವರ ಪರಿಸ್ಥಿತಿ ಈಗ ಹೇಗಿದೆ? ಜಮೀನ್ದಾರಿ ಕುಟುಂಬಗಳು ಬಡ, ಮುಗ್ಧ ಕುಡುಬಿಗಳ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಐಶಾರಾಮಿ ಮನೆಗಳನ್ನು ಕಟ್ಟಿಕೊಂಡಿವೆ. ಕುಡುಬಿಗಳ ಮೂರು ಬೆಳೆ ಬೆಳೆಯುವ ಗದ್ದೆಯನ್ನೇ ಜಮೀನ್ದಾರರ ಗುತ್ತು ಬರ್ಕೆಗಳು ಕಂಬಳ ಗದ್ದೆಯನ್ನಾಗಿಸಿಕೊಂಡಿವೆ. ಸಣ್ಣ ರೈತರು ಕುಳಾಯಿ ಗುಡ್ಡೆಯ ನಿರ್ವಸಿತರ ಕಾಲನಿಯಲ್ಲಿ ಅತ್ಯಂತ ಕೆಟ್ಟದಾಗಿ ಬದುಕುತ್ತಿದ್ದಾರೆ. ಭೂಮಿ ಕಳೆದುಕೊಂಡ ಪ್ರತೀ ಕುಟುಂಬಕ್ಕೆ ಒಎನ್‌ಜಿಸಿಯ ಎಂಆರ್‌ಪಿಎಲ್‌ನಲ್ಲಿ ಉದ್ಯೋಗ ನೀಡಲಾಗುತ್ತೆ ಎಂಬ ಭರವಸೆ ಈವರೆಗೂ ಈಡೇರಿಲ್ಲ. ಮೊದಲ ಹಂತದ ವಿಶೇಷ ಅರ್ಥಿಕ ವಲಯ ಜಾರಿಯಾದರೆ 10 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಆಗಿನ ಎಸ್‌ಇಝಡ್ ಎಂಡಿ ಎ.ಜಿ.ಪೈ ಭ್ರಮಾಲೋಕವೊಂದನ್ನು ಸೃಷ್ಟಿಸಿದ್ದರು. ಕೈ ತುಂಬಾ ಕಾಸು, ಬದುಕಿಗೊಂದು ಉದ್ಯೋಗ ಸಿಗುತ್ತದೆ ಎಂದು ನಂಬಿದ್ದ ಜನ ಮೂರು ಬೆಳೆ ಬೆಳೆಯುವ ಬದುಕಿಗಾಧಾರವಾಗಿದ್ದ ಕೃಷಿ ಭೂಮಿಯನ್ನು ಬಿಟ್ಟುಕೊಟ್ಟು ಈಗಲೂ ನಿರುದ್ಯೋಗಿಗಳಾಗಿಯೇ ಇದ್ದಾರೆ.

2007ರಿಂದ 2021ರವರೆಗೆ ಪ್ರತೀ ವರ್ಷ ಉದ್ಯೋಗ ನೇಮಕಾತಿಯನ್ನು ಎಂಆರ್‌ಪಿಎಲ್, ಒಎನ್‌ಜಿಸಿ ಮಾಡುತ್ತದೆ. ಅದರಲ್ಲಿ ಯಾವತ್ತೂ ಭೂಮಿ ಕಳೆದುಕೊಂಡವರಿಗೆ ಪ್ರಾಧಾನ್ಯತೆ ಕೊಡಲೇ ಇಲ್ಲ. 2011ರ ಜನವರಿ 21ರಂದು 1,800 ಎಕರೆಯಲ್ಲಿ ಭೂಮಿ ಕಳೆದುಕೊಂಡ ಕುಟುಂಬದ ನೂರಾರು ಯುವಕ- ಯುವತಿಯರು ಎಸ್‌ಇಝಡ್ ಕಚೇರಿ ಎದುರು ಉದ್ಯೋಗಕ್ಕಾಗಿ ಹೋರಾಟ ಪ್ರಾರಂಭಿಸಿದರು. ಒಂದು ದಿನ ಕಳೆಯಿತು, ಎರಡು ದಿನ ಕಳೆಯಿತು, ಮೂರು ದಿನ ಕಳೆದರೂ ಈ ಯುವಕ-ಯುವತಿಯರ ಹೋರಾಟಕ್ಕೆ ಜಿಲ್ಲಾಡಳಿತವಾಗಲಿ, ಎಸ್‌ಇಝಡ್ ಕಂಪೆನಿಯಾಗಲಿ ಕವಡೆ ಕಾಸಿನ ಕಿಮ್ಮತ್ತೂ ಕೊಡಲಿಲ್ಲ. ಅದಾಗಲೇ ಈ ಭೂಮಿ ಕೊಡಲು ನೇತೃತ್ವ ವಹಿಸಿದ್ದ ಊರಿನ ಮುಖಂಡರಾಗಿದ್ದ ಜಮೀನ್ದಾರರು ಎಸ್‌ಇಝಡ್ ಗುತ್ತಿಗೆದಾರರಾಗಿದ್ದರು. ಆಗ ಮತ್ತೆ ಆ ಯುವಕ ಯುವತಿಯರ ಉದ್ಯೋಗದ ಹೋರಾಟಕ್ಕೆ ಸಾಥ್ ನೀಡಿದ್ದು ವಿದ್ಯಾದಿನಕರ್ ಮಾರ್ಗದರ್ಶನದ ಕೃಷಿ ಭೂಮಿ ಸಂರಕ್ಷಣಾ ಸಮಿತಿ. ಎಂಆರ್‌ಪಿಎಲ್ ಮತ್ತು ಎಸ್‌ಇಝಡ್ ಉದ್ಯೋಗ ನೀಡುವುದರ ಬದಲು ಉದ್ಯೋಗಗಳನ್ನು ಕಸಿಯುತ್ತದೆ ಎಂದು ಕೃಷಿ ಭೂಮಿ ಸಮಿತಿ ಹಲವು ಸೆಮಿನಾರ್‌ಗಳನ್ನು ಏರ್ಪಡಿಸಿತ್ತು. ಅದಕ್ಕಾಗಿ ರಾಷ್ಟ್ರೀಯ ಅಂತರ್‌ರಾಷ್ಟ್ರೀಯ ಮಟ್ಟದ ಪರಿಸರವಾದಿಗಳು, ಚಿಂತಕರನ್ನು ಮಂಗಳೂರಿಗೆ ಕರೆಸಲಾಗಿತ್ತು. ಆಗೆಲ್ಲಾ ಎಸ್‌ಇಝಡ್ ಅನ್ನು ಬೆಂಬಲಿಸಿದವರು ಈಗ ಉದ್ಯೋಗ ಇಲ್ಲ ಎಂದು ಧ್ವನಿ ಎತ್ತತೊಡಗಿದ್ದಾರೆ. ಕುತ್ತೆತ್ತೂರಿನಲ್ಲಿರುವ ಎಂಆರ್‌ಪಿಎಲ್ ಮೂರ್ನಾಲ್ಕು ಗ್ರಾಮಗಳನ್ನು ಆವರಿಸಿದೆ. ಎಂಆರ್‌ಪಿಎಲ್‌ನ ಪಕ್ಕದಲ್ಲಿ ಹುಟ್ಟುವ ತೊರೆಯೊಂದು ನಂದಿನಿ ನದಿಯನ್ನು ಸೇರುತ್ತದೆ. ಈ ತೊರೆಯಲ್ಲಿ ಪೆಟ್ರೋಲ್ ಜಿನುಗುತ್ತಿದೆ ಎಂದು 2008ರಲ್ಲಿ ವಿದ್ಯಾದಿನಕರ್ ಮತ್ತು ತಂಡ ಅಧ್ಯಯನ ಮಾಡಿ ಹೇಳಿದ್ದರೂ ಜನ ತಲೆಗೆ ಹಾಕಿಕೊಂಡಿರಲಿಲ್ಲ. ನಂತರದ ದಿನಗಳಲ್ಲಿ ಈ ತೊರೆಯ ನೀರು ನಂದಿನಿ ನದಿ ಸೇರಿ ಮಳೆಗಾಲದಲ್ಲಿ ಸೂರಿಂಜೆ, ಪಂಜ, ಮದ್ಯ, ಚೇಳ್ಯಾರು ಸೇರಿದಂತೆ ಹಲವು ಗ್ರಾಮಗಳ ಗದ್ದೆಯನ್ನು ಸೇರುತ್ತದೆ. ಈಗ ಸೂರಿಂಜೆ, ಪೊನ್ನಗಿರಿಯ ಗದ್ದೆಗಳಲ್ಲಿ ಕೃಷಿ ಮಾಡೋದು ಬಿಡಿ, ಕನಿಷ್ಠ ಗದ್ದೆಗೂ ಇಳಿಯುವಂತಿಲ್ಲ. 2007ಕ್ಕೂ ಮೊದಲು ಮಳೆಗಾಲದ ಈ ಗದ್ದೆಗಳಲ್ಲಿ ಸಿಗಡಿ ಸೇರಿದಂತೆ ಹಲವು ವಿಧದ ಮೀನು ಹಿಡಿಯುತ್ತಿದ್ದವರು ಈಗ ತುರಿಕೆಗೆ ಹೆದರಿ ಗದ್ದೆಗೆ ಇಳಿಯುತ್ತಿಲ್ಲ. ಮೀನು, ಸಿಗಡಿ ಬಿಡಿ, ಕನಿಷ್ಠ ಕಪ್ಪೆಯೂ ಬದುಕದ ವಾತಾವರಣ ನಿರ್ಮಾಣವಾಗಿದೆ. ನೂರಾರು ಕೃಷಿಕರ, ಮುಂದಿನ ಪೀಳಿಗೆಯ ನೂರಾರು ವರ್ಷಗಳಿಗೆ ಲಕ್ಷಾಂತರ ಯುವ ಸಮುದಾಯಕ್ಕೆ ಶಾಶ್ವತ ಉದ್ಯೋಗ ನೀಡಬಹುದಾಗಿದ್ದ ಕೃಷಿ ಭೂಮಿಯನ್ನು ಈ ಎಂಆರ್‌ಪಿಎಲ್, ಎಸ್‌ಇಝಡ್ ಗಳು ಕಿತ್ತುಕೊಂಡಿವೆ. ಕಾಲ ಮಿಂಚಿದ ಮೇಲೆ ನಾವು 184 ಉದ್ಯೋಗಗಳಲ್ಲಿ ಕನ್ನಡಿಗರಿಗೆ ಎಂಆರ್‌ಪಿಎಲ್ ಸರಿಯಾದ ಪಾಲು ಕೊಡಲಿಲ್ಲ ಎಂದು ಕೇಳುತ್ತಿದ್ದೇವೆ. ಕಳೆದ 15 ವರ್ಷಗಳಲ್ಲಿ ನಾವು ಲಕ್ಷಾಂತರ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಕಳೆದುಕೊಂಡಿದ್ದೇವೆ. ಮುಂದಿನ ಪೀಳಿಗೆಯ ನೂರಾರು ವರ್ಷಗಳ ಉದ್ಯೋಗವನ್ನೂ ನಾಶ ಮಾಡಿದ್ದೇವೆ ಎಂಬುದು ನಮಗೆ ತಿಳಿಯಬೇಕಿದೆ.

share
ನವೀನ್ ಸೂರಿಂಜೆ
ನವೀನ್ ಸೂರಿಂಜೆ
Next Story
X