ಮೇ 24ರಂದು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರ ಆನ್‍ಲೈನ್ ಚಳವಳಿ
ತುಮಕೂರು, ಮೇ 23: ಕೋವಿಡ್ ಮಹಾಮಾರಿಯನ್ನು ತಡೆಯುವ ನಿಟ್ಟಿನಲ್ಲ ಪ್ರೆಂಟ್‍ಲೈನ್ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತರಿಗೆ ಅಗತ್ಯವಿರುವ ಮಾಸ್ಕ್, ಸಾನಿಟೈಸರ್, ಇನ್ನಿತರ ಅಗತ್ಯ ಮುಂಜಾಗ್ರತಾ ಪರಿಕರಗಳನ್ನು ವಿತರಿಸಬೇಕೆಂದು ಒತ್ತಾಯಿಸಿ, ಮೇ 24ರಂದು ರಾಜ್ಯದ 42 ಸಾವಿರ ಆಶಾ ಕಾರ್ಯಕರ್ತೆಯರು ಆನ್‍ಲೈನ್ ಚಳವಳಿ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ತಿಳಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೋವಿಡ್ ಸೋಂಕಿಗೆ ಒಳಗಾಗ ವ್ಯಕ್ತಿಗಳನ್ನು ಗುರುತಿಸಿ, ಅವರು ಹೋಂ ಕ್ವಾರಂಟೈನ್‍ನಲ್ಲಿ ಇರುವಾಗ ಪ್ರತಿದಿನ ಅವರ ಆರೋಗ್ಯ ವಿಚಾರಿಸಿ, ಇಲಾಖೆಗೆ ವರದಿ ಒಪ್ಪಿಸುವ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರಿಗೆ ಸರಕಾರ ಇದುವರೆಗೂ ಮಾಸ್ಕ್, ಸ್ಯಾನಿಟೈಜರ್, ಗ್ಲೌಸ್ ಏನನ್ನು ನೀಡಿಲ್ಲ. ಅಲ್ಲದೆ ಇತರೆ ಇಲಾಖೆಗಳ ವಾರಿಯರ್ಸ್‍ಗಳಿಗೆ ನೀಡುವಂತೆ ಮಾಸಿಕ ಐದು ಸಾವಿರ ವಿಶೇಷ ಭತ್ಯೆಯನ್ನು ನೀಡದೆ ತಾರತಮ್ಯ ಮಾಡಲಾಗುತ್ತಿದೆ ಎಂಬುದು ಆಶಾ ಕಾರ್ಯಕರ್ತೆಯರ ಆರೋಪವಾಗಿದೆ.
ಈಗಾಗಲೇ ಸರಕಾರ ಘೋಷಣೆ ಮಾಡಿರುವಂತೆ ಕೋವಿಡ್19 ಮತ್ತು ಮೊದಲ ಮತ್ತು ಎರಡನೇ ಅಲೆಯಲ್ಲಿ ಸೋಂಕಿಗೆ ಒಳಗಾಗಿ ಸಾವನ್ನಪ್ಪಿರುವ ಆಶಾ ಕಾರ್ಯಕರ್ತರಿಗೆ ಸರಕಾರ ಐವತ್ತು ಲಕ್ಷ ರೂ ಪರಿಹಾರ ನೀಡಬೇಕು. ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಚಿಕತ್ಸಾ ವೆಚ್ಚವಾಗಿ 25 ಸಾವಿರ ಹಾಗು ಬಾಕಿ ಇರುವ ಮಾಸಿಕ ಗೌರವ ಧನವನ್ನು ನೀಡಬೇಕೆಂಬುದು ಆಶಾ ಕಾರ್ಯಕರ್ತೆಯರ ಬೇಡಿಕೆಯಾಗಿದೆ.
ಈ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮೇ 24ರಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ರಾಜ್ಯ ಮಟ್ಟದ ಹೋರಾಟವನ್ನು ಆಶಾ ಕಾರ್ಯಕರ್ತೆಯರು ಆನ್ ಲೈನ್ ಮೂಲಕ ಬೇಡಿಕೆಗಳ ಪೋಸ್ಟರ್ ಹಿಡಿದು ಚಳವಳಿ ಮಾಡುತ್ತಿದ್ದು, ಆಶಾ ಕಾರ್ಯಕರ್ತೆಯರು ತಾವು ಕೆಲಸ ನಿರ್ವಹಿಸುವ ಸ್ಥಳದಿಂದಲೇ ಹೋರಾಟದಲ್ಲಿ ಭಾಗವಹಿಸಬೇಕೆಂದು ಸಂಘದ ಜಿಲ್ಲಾ ಕಾರ್ಯದರ್ಶಿ ಲತಾ ಮನವಿ ಮಾಡಿದ್ದಾರೆ.







