ಕೋವಿಡ್ ನಿರ್ವಹಣೆಯಲ್ಲಿ ಮಾಧ್ಯಮ ಪಾತ್ರ ಮಹತ್ತರ : ನೇಮಿರಾಜ ಅರಿಗ
ಕಾರ್ಕಳ: ಕೋವಿಡ್ ನಿರ್ವಹಣೆಯಲ್ಲಿ ಮಾಧ್ಯಮಗಳ ಪಾತ್ರ ಮಹತ್ತರವಾಗಿದ್ದು ಮಾಧ್ಯಮಗಳು ಈ ಕುರಿತು ಜನರಿಗೆ ಆಗಾಗ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ನೇಮಿರಾಜ ಅರಿಗ ಹೇಳಿದರು.
ಪ್ರವಾಸಿ ಮಂದಿರದಲ್ಲಿ ರವಿವಾರ ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್‌ನ ವತಿಯಿಂದ ಆಯೋಜಿಸಿದ ಮಾಧ್ಯಮ ಮಿತ್ರರಿಗೆ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಿಟ್‌ಗಳನ್ನು ವಿತರಿಸಿದ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ ಕಾರ್ಕಳವನ್ನು ಕೊರೋನ ಮುಕ್ತವನ್ನಾಗಿ ಮಾಡಲು ಸತತ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಮೂರು ಸೂತ್ರಗಳ ಮೂಲಕತಾಲ್ಲೂಕು ಆಡಳಿತದ ಸಹಯೋಗದಲ್ಲಿ ಕೋವಿಡ್ ವಿರುದ್ಧ ಸಮರೋಪಾದಿಯಲ್ಲಿ ಕ್ಷೇತ್ರಕಾರ್ಯ ನಡೆಯುತ್ತಿದೆ. ಮಾಧ್ಯಮಗಳು ವಾಸ್ತವ ವಿಚಾರಗಳನ್ನು ಪ್ರಕಟಿಸುವ ಮೂಲಕ ಜನರಲ್ಲಿ ಕೊರೋನ ನಿಯಮಗಳನ್ನು ತಪ್ಪದೇ ಪಾಲಿಸಲು ತಿಳಿಯಪಡಿಸಬೇಕು ಎಂದರು.
ರಾಜ್ಯ ಗೇರು ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ತಹಶೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿ ಶುಭಹಾರೈಸಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಮುಹಮ್ಮದ್ ಶರೀಫ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪಾಧ್ಯಕ್ಷ ಹರಿಪ್ರಸಾದ್ ನಂದಳಿಕೆ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣ ನಾಯಕ್ ವಂದಿಸಿದರು.





