ಅಸ್ಸಾಂ: ಎನ್ ಕೌಂಟರ್ ನಲ್ಲಿ 8 ಡಿಎನ್ಎಲ್ಎ ಉಗ್ರರ ಹತ್ಯೆ
ದಿಪು,ಮೇ 23: ಅಸ್ಸಾಂನ ಪಶ್ಚಿಮ ಕರ್ಬಿ ಆಂಗ್ಲೊಂಗ್ ಜಿಲ್ಲೆಯಲ್ಲಿ ರವಿವಾರ ಭದ್ರತಾ ಪಡೆಗಳು ಎನ್ಕೌಂಟರ್ ನಡೆಸಿ ದಿಮಾಸಾ ನ್ಯಾಶನಲ್ ಲಿಬರೇಶನ್ ಆರ್ಮಿ (ಡಿಎನ್ಎಲ್ಎ)ಯ ಎಂಟು ಮಂದಿ ಉಗ್ರರನ್ನು ಹತ್ಯೆಗೈದಿದ್ದಾರೆ.
ಮಿಚಿಬೈಲುಂಗ್ ಎಂಬಲ್ಲಿ ಉಗ್ರರು ಅಡಗಿಕೊಂಡಿರುವ ಬಗ್ಗೆ ಸುಳಿವು ದೊರೆತ ಪೊಲೀಸ್ ಅಧಿಕಾರಿಗಳು ಹಾಗೂ ಅಸ್ಸಾಂ ರೈಫಲ್ಸ್ ಯೋಧರ ಜಂಟಿ ತಂಡವು ಕಾರ್ಯಾಚರಣೆಯನ್ನು ನಡೆಸಿತ್ತು. ಪಶ್ಚಿಮ ಕರ್ಬಿ ಆಂಗ್ಲಾಂಗ್ನ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್ಪಿ) ಪ್ರಕಾಶ್ ಸೊನೋವಾಲ್ ಅವರು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.
ಮಿಚಿಬೈಲುಂಗ್ ಪ್ರದೇಶದಲ್ಲಿ ಭದ್ರತಾಸಿಬ್ಬಂದಿ ಹಾಗೂ ಡಿಎನ್ಎಲ್ಎ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಎಂಟು ಮಂದಿ ಉಗ್ರರನ್ನು ಹೊಡೆದುರುಳಿಸಲಾಗಿದೆಯೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುಂಡಿನ ಕಾಳಗದ ಬಳಿಕ ಆರು ಮೃತದೇಹಗಳನ್ನು ಆರಂಭದಲ್ಲಿ ಪತ್ತೆಹಚ್ಚಲಾಗಿತ್ತು ಹಾಗೂ ಆನಂತರ ನಡೆದ ಕೂಂಬಿಂಗ್ ಕಾರ್ಯಾಚರಣೆಯ ಸಂದರ್ಭ ಶಂಕಿತ ಬಂಡುಕೋರ ಗುಂಪಿನ ಉನ್ನತ ನಾಯಕರೆಂದು ಶಂಕಿಸಲಾದ ಎರಡು ಶವಗಳನ್ನು ಪತ್ತೆಹಚ್ಚಲಾಯಿತು.
ಹತ ಉಗ್ರರ ಬಳಿ ನಾಲ್ಕು ಎಕೆ-47 ರೈಫಲ್ಗಳು ಹಾಗೂ ಹಲವಾರು ಸುತ್ತಿನ ಕಾಡತೂಸುಗಳು ಪತ್ತೆಯಾಗಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.





