ರಾಜ್ಯದಲ್ಲಿನ ಖನಿಜ ನಿಕ್ಷೇಪ ಪತ್ತೆ ಹಚ್ಚಲು ಜಾಗತಿಕ ಟೆಂಡರ್: ಸಚಿವ ಮುರುಗೇಶ್ ನಿರಾಣಿ

ಮೈಸೂರು,ಮೇ.23: ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿಗೊಳಿಸಿ, ಬಡವರು ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದಾಗಿ ಗಣಿ ಮತ್ತೂ ಭೂ ವಿಜ್ಙಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ರವಿವಾರ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮತನಾಡಿದ ಅವರು, ರಾಜ್ಯದಲ್ಲಿ ನೂತನವಾಗಿ ಮರಳು ನೀತಿ ಜಾರಿಗೊಳಿಸಲಾಗುತ್ತಿದೆ. ಇದರಿಂದ ಅಕ್ರಮ ಗಣಿಗಾರಿಕೆಗೆ ನಿಯಂತ್ರಣವಾಗುತ್ತದೆ. ಗಣಿಗಾರಿಕೆ ನಡೆಸುವವರು ಮತ್ತು ಮರಳು ಸಾಗಾಣಿಕೆ ಮಾಡುವವರು ಸರ್ಕಾರಕ್ಕೆ ಗೌರವಧನ ನೀಡಬೇಕಾಗುತ್ತದೆ. ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರದ ಸಹಾಯಧನ 5 ಲಕ್ಷದಲ್ಲಿ ಮನೆ ನಿರ್ಮಿಸುವವರಿಗೆ ಉಚಿತವಾಗಿ ಮರಳು ನೀಡಲಾಗುವುದು ಎಂದರು.
ಅಲ್ಲದೆ ಸಾರ್ವಜನಿಕರು ಸ್ಕೂಟರ್ ಮತ್ತು ಎತ್ತಿನ ಗಾಡಿಯಲ್ಲಿ ಮರಳು ಸಾಗಿಸುವವರ ವಿರುದ್ಧ ಮುಂದಿನ ದಿನಗಳಲ್ಲಿ ಪ್ರಕರಣ ದಾಖಲಿಸದಂತೆ ನೋಡಿಕೊಳ್ಳಲಾಗುವುದು. ರಾಜ್ಯದಲ್ಲಿನ ಖನಿಜ ನಿಕ್ಷೇಪ ಪತ್ತೆಹಚ್ಚಲು ಜಾಗತಿಕ ಟೆಂಡರ್ ಕರೆಯಲಾಗುವುದು. ರಾಜ್ಯದ ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಮಾಣದ ಖನಿಜ ಸಂಪತ್ತು ಇದೆ. ಅದರ ಮೌಲ್ಯವೇನು ಮತ್ತು ಗುಣಮಟ್ಟವನ್ನು ಪರೀಕ್ಷಿಸಲು ಇದು ನೆರವಾಗಲಿದ್ದು, ಡ್ರಿಲ್ ಮಾಡುವ ಮೂಲಕ ಖನಿಜ ನಿಕ್ಷೇಪ ಪತ್ತೆಹಚ್ಚುವುದಾಗಿ ಅವರು ಹೇಳಿದರು.
ಗಣಿ ಮತ್ತು ಭೂ ವಿಜ್ಙಾನ ಇಲಾಖೆಯಲ್ಲಿ ಸುಮಾರು 1,600 ಕೋಟಿ ಹಣವಿದ್ದು, ಕೋವಿಡ್‍ನ ಈ ಸಂದರ್ಭದಲ್ಲಿ ಸರ್ಕಾರಕ್ಕೆ ನೆರವಾಗಲು ಶೇ. 30ರಷ್ಟನ್ನು ವಿನಿಯೋಗಿಸಲಾಗುವುದು. ಅಗತ್ಯ ಬಿದ್ದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಡನೆ ಚರ್ಚಿಸಿ ಮತ್ತಷ್ಟು ಹಣ ನೀಡಲಾಗುವುದು. ಈ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಸರ್ಕಾರಕ್ಕೆ ಸಹಕಾರ ನೀಡಬೇಕು ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಆಸ್ಪತ್ರೆಗಳಿಗೆ ಬೇಕಾದ ಹಾಸಿಗೆ, ಆಕ್ಸಿಜನ್ ಮುಂತಾದ ಸೌಲಭ್ಯವನ್ನು ಕಲ್ಪಿಸಲಾಗುತ್ತಿದ್ದು, ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ನೀಡಲಾಗುತ್ತಿದೆ. ಇದರಲ್ಲಿ ಯಾವುದೇ ಕೊರತೆ ಇಲ್ಲ ಎಂದು ಅವರು ತಿಳಿಸಿದರು.
ಪ್ರಸ್ತುತ 3ನೇ ಅಲೆಯ ಭೀತಿ ಎದುರಾಗಿದೆ. ಆಗಸ್ಟ್ ವೇಳೆಗೆ ಕೊರೋನ 3ನೇ ಅಲೆಕಂಡು ಬರುವ ಸಾಧ್ಯತೆ ಇದೆ. ಇದಕ್ಕಾಗಿ ಸರ್ಕಾರ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬದಲಾವಣೆ ಇಲ್ಲ. ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸಲಾಗುವುದು. ನಾಯಕತ್ವ ಬದಲಾವಣೆ ಎನ್ನುವುದು ಕೇವಲ ಮಾಧ್ಯಮ ಸೃಷ್ಟಿ ಎಂದು ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಗಣಿ ಮತ್ತು ಭೂ ವಿಜ್ಙಾನ ಇಲಾಖೆ ಅಧಿಕಾರಿಗಳು ಇದ್ದರು.







