12ನೇ ತರಗತಿ ಸಿಬಿಎಸ್ಇ ಪರೀಕ್ಷೆಗಳನ್ನು ನಡೆಸಲು ಎರಡು ಪ್ರಸ್ತಾವಗಳ ಸಲ್ಲಿಕೆ
ಹೊಸದಿಲ್ಲಿ, ಮೇ 23: ಕೋವಿಡ್ ಎರಡನೇ ಅಲೆಯಿಂದಾಗಿ ಮುಂದೂಡಲ್ಪಟ್ಟಿದ್ದ 12ನೇ ತರಗತಿಯ ಪರೀಕ್ಷೆಗಳನ್ನು ನಡೆಸಲು ಎರಡು ಆಯ್ಕೆಗಳ ಪ್ರಸ್ತಾವಗಳನ್ನು ಸಿಬಿಎಸ್ಇ ಮಂಡಿಸಿದೆ. ರವಿವಾರ ಅಪರಾಹ್ನ ಇಲ್ಲಿ ನಡೆದ ಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ನೇತೃತ್ವದ ಸಚಿವರ ಸಮಿತಿಯ ಮುಂದೆ ಈ ಪ್ರಸ್ತಾವಗಳನ್ನು ಇರಿಸಲಾಗಿದೆ. ಕೇಂದ್ರವು ಸಂಕ್ಷಿಪ್ತ ರೂಪದ ಪರೀಕ್ಷೆಗೆ ಒಲವು ವ್ಯಕ್ತಪಡಿಸುವ ಸಾಧ್ಯತೆಯಿದ್ದು,ರಾಜ್ಯ ಮಂಡಳಿಗಳಿಗೆ ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಲಾಗುವುದು ಎಂದು ಸಿಬಿಎಸ್ಇ ಮೂಲಗಳು ತಿಳಿಸಿದವು.
ಮೊದಲ ಆಯ್ಕೆಯಡಿ ಪರೀಕ್ಷಾ ಪೂರ್ವ ಚಟುವಟಿಕೆಗಳಿಗಾಗಿ ಒಂದು ತಿಂಗಳು ಹಾಗೂ ಪರೀಕ್ಷೆಗಳು ಮತ್ತು ಫಲಿತಾಂಶ ಘೋಷಣೆಗಾಗಿ ಎರಡು ತಿಂಗಳು ಸೇರಿದಂತೆ ಒಟ್ಟು ಮೂರು ತಿಂಗಳ ಅವಧಿಯಲ್ಲಿ ಪರೀಕ್ಷೆಗಳನ್ನು ನಡೆಸಬಹುದಾಗಿದೆ. ಪೂರಕ ಪರೀಕ್ಷೆಗಳನ್ನು ನಡೆಸಲು ಪ್ರತ್ಯೇಕ 30 ದಿನಗಳ ಕಾಲಾವಕಾಶವನ್ನು ನೀಡಲಾಗುತ್ತದೆ. ಮೇಜರ್ ವಿಷಯಗಳಲ್ಲಿ ಮಾತ್ರ ಪರೀಕ್ಷೆಯನ್ನು ನಡೆಸಲಾಗುವುದು ಮತ್ತು ಇವುಗಳಲ್ಲಿ ವಿದ್ಯಾರ್ಥಿಗಳ ಸಾಧನೆಯ ಆಧಾರದಲ್ಲಿ ಮೈನರ್ ವಿಷಯಗಳಿಗೆ ಅಂಕಗಳನ್ನು ನೀಡಲಾಗುವುದು.
ಎರಡನೇ ಆಯ್ಕೆಯಡಿ 19 ಮೇಜರ್ ವಿಷಯಗಳಲ್ಲಿ 90 ನಿಮಿಷಗಳ ಅವಧಿಯ ಪರೀಕ್ಷೆಯನ್ನು ನಡೆಸಲಾಗುವುದು. ವಿದ್ಯಾರ್ಥಿಗಳು ಒಂದು ಭಾಷಾ ಮತ್ತು ಮೂರು ಐಚ್ಛಿಕ ವಿಷಯಗಳಲ್ಲಿ ಮಾತ್ರ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಈ ವಿಷಯಗಳಲ್ಲಿಯ ಸಾಧನೆಯ ಆಧಾರದಲ್ಲಿ ಐದು ಮತ್ತು ಆರನೇ ವಿಷಯಗಳಲ್ಲಿ ವೌಲ್ಯಮಾಪನ ಮಾಡಲಾಗುತ್ತದೆ.