ಉತ್ತರಪ್ರದೇಶ ಪೊಲೀಸರ ಥಳಿತದಿಂದ ಯುವಕನ ಸಾವು ಪ್ರಕರಣ: ಹೋಮ್ ಗಾರ್ಡ್ ಬಂಧನ, ಇಬ್ಬರು ಪೊಲೀಸರು ಪರಾರಿ

ಲಕ್ನೋ, ಮೇ 23: ಉತ್ತರ ಪ್ರದೇಶದ ಉನ್ನಾವೊದಲ್ಲಿ ಪೊಲೀಸರ ಥಳಿತದಿಂದ ಹದಿಹರೆಯದ ಯುವಕನೋರ್ವ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇವೆಯಿಂದ ವಜಾಗೊಂಡಿರುವ ಹೋಮ್ಗಾರ್ಡ್ ಸತ್ಯಪ್ರಕಾಶ ಎಂಬಾತನನ್ನು ರವಿವಾರ ಬಂಧಿಸಲಾಗಿದೆ.
ಪ್ರಕರಣದಲ್ಲಿ ಆರೋಪಿಗಳಾಗಿರುವ ಪೊಲೀಸರಿಬ್ಬರು ತಲೆಮರೆಸಿಕೊಂಡಿದ್ದು,ಅವರನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಈ ಎಲ್ಲ ಮೂವರು ಆರೋಪಿಗ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಆರೋಪಿಗಳು ಶುಕ್ರವಾರ ಉನ್ನಾವೊದ ಬಂಗಾರಮಾವು ಎಂಬಲ್ಲಿ ತನ್ನ ಮನೆಯ ಹೊರಗೆ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದ 17ರ ಹರೆಯದ ಯುವಕನ್ನು ಕೋವಿಡ್ ಕರ್ಫ್ಯೂ ಉಲ್ಲಂಘನೆ ಆರೋಪದಲ್ಲಿ ಠಾಣೆಗೆ ಕರೆತಂದು ಥಳಿಸಿದ್ದು,ಆತ ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ. ಈ ಹಿನ್ನೆಲೆಯಲ್ಲಿ ಸತ್ಯಪ್ರಕಾಶನನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು ಮತ್ತು ಪೊಲೀಸ್ ಕಾನ್ಸ್ಟೇಬಲ್ಗಳಾದ ವಿಜಯ ಚೌಧುರಿ ಮತ್ತು ಸಿಮಾವತ್ ಅವರನ್ನು ಅಮಾನತುಗೊಳಿಸಲಾಗಿತ್ತು.
ಪೊಲೀಸರ ದೌರ್ಜನ್ಯವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಸ್ಥಳೀಯರು ತಪ್ಪಿತಸ್ಥರ ವಿರುದ್ಧ ಕ್ರಮ,ಮೃತನ ಕುಟುಂಬಕ್ಕೆ ಸರಕಾರಿ ಉದ್ಯೋಗ ಮತ್ತು ಪರಿಹಾರಕ್ಕೆ ಆಗ್ರಹಿಸಿದ್ದರು. ಅಧಿಕಾರಿಗಳಿಂದ ಭರವಸೆ ದೊರಕಿದ ಬಳಿಕವಷ್ಟೇ ಯುವಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪೊಲೀಸರಿಗೆ ಹಸ್ತಾಂತರಿಸಿದ್ದರು.





