12ನೇ ತರಗತಿ ಪರೀಕ್ಷೆ ಬಗ್ಗೆ ಶೀಘ್ರವೇ ನಿರ್ಧಾರ: ಪೋಖ್ರಿಯಾಲ್

ಹೊಸದಿಲ್ಲಿ,ಮೇ 23: 12ನೇ ತರಗತಿಯ ವಾರ್ಷಿಕ ಪರೀಕ್ಷೆಗಳನ್ನು ನಡೆಸುವ ಬಗ್ಗೆ ರವಿವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ. 12ನೇ ತರಗತಿ ಪರೀಕ್ಷೆ ಕುರಿತು ಮೇ 25ರೊಳಗೆ ವಿಸ್ತೃತವಾದ ಸಲಹೆಗಳನ್ನು ನೀಡುವಂತೆ ಕೋರಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ರಾಜ್ಯ ಸರಕಾರಗಳನ್ನು ಕೋರಿದ್ದಾರೆ.
ಶೀಘ್ರವೇ ಈ ಬಗ್ಗೆ ಅಂತಿಮವಾದ ನಿರ್ಧಾರಕೈಗೊಳ್ಳಲಾಗುವುದೆಂದು ಅವರು ತಿಳಿಸಿದ್ದಾರೆ.
ಕೋವಿಡ್-19 ಎರಡನೆ ಅಲೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿರುವ 12ನೇ ತರಗತಿ ಪರೀಕ್ಷೆಗಳನ್ನು ಹಾಗೂ ಎಂಜಿನಿಯರಿಂಗ್,ಮೆಡಿಕಲ್ ಸಹಿತ ವಿವಿಧ ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪರೀಕ್ಷೆಗಳ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲು ಕೇಂದ್ರ ಶಿಕ್ಷಣ ಸಚಿವಾಲಯವು ವರ್ಚುವಲ್ ಸಭೆಯನ್ನು ನಡೆಸಿತ್ತು.
ಎರಡು ತಾಸುಗಳ ಕಾಲ ನಡೆದ ಸಭೆಯಲ್ಲಿ ಕೇಂದ್ರ ಸಚಿವರಾದ ಸ್ಮತಿ ಇರಾನಿ, ಪ್ರಕಾಶ್ ಜಾವ್ಡೇಕರ್ ಹಾಗೂ ಸಂಜಯ್ ಧೋತ್ರೆ ಹಾಗೂ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಶಿಕ್ಷಣ ಸಚಿರು ಹಾಗೂ ಕಾರ್ಯದರ್ಶಿಗಳು ಭಾಗವಹಿಸಿದ್ದರು.





