ಚೀನಾ: ಗುಡ್ಡಗಾಡು ಓಟದಲ್ಲಿ ಭಾಗವಹಿಸಿದ 21 ಮಂದಿ ತೀವ್ರ ಚಳಿಯಲ್ಲಿ ಸಾವು

ಬೀಜಿಂಗ್ (ಚೀನಾ), ಮೇ 23: ಚೀನಾದಲ್ಲಿ 100 ಕಿಲೋಮೀಟರ್ ಗುಡ್ಡಗಾಡು ಓಟದಲ್ಲಿ ಭಾಗವಹಿಸಿದವರ ಪೈಕಿ 21 ಮಂದಿ ಚಳಿಯನ್ನು ತಾಳಲಾರದೆ ಮೃತಪಟ್ಟಿದ್ದಾರೆ ಎಂದು ಚೀನಾದ ಸರಕಾರಿ ಟೆಲಿವಿಶನ್ ಸಿಸಿಟಿವಿ ರವಿವಾರ ವರದಿ ಮಾಡಿದೆ.
ಓಟಗಾರರು ಆಲಿಕಲ್ಲು ಹಾಗೂ ಶೀತಲ ಮಳೆ ಮತ್ತು ವೇಗದ ಗಾಳಿಯನ್ನು ಎದುರಿಸಿ ಓಡುತ್ತಿದ್ದರು.
ನಾಪತ್ತೆಯಾಗಿದ್ದ ಓರ್ವ ಓಟಗಾರ ರವಿವಾರ ಬೆಳಗ್ಗೆ ಪತ್ತೆಯಾಗಿದ್ದಾರೆ. ಆದರೆ ಅಷ್ಟರಲ್ಲೇ ಅವರ ಪ್ರಮುಖ ಅಂಗಗಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದವು ಎಂದು ಸ್ಥಳೀಯ ರಕ್ಷಣಾ ಅಧಿಕಾರಿಗಳನ್ನು ಉಲ್ಲೇಖಿಸಿ ಸಿಸಿಟಿವಿ ವರದಿ ಮಾಡಿದೆ.
ಇದರೊಂದಿಗೆ ಈ ಗುಡ್ಡಗಾಡು ಓಟದಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 21ಕ್ಕೇರಿದೆ ಎಂದು ಅದು ತಿಳಿಸಿದೆ.
ಇದಕ್ಕೂ ಮೊದಲು, 20 ಮಂದಿ ಮೃತಪಟ್ಟಿದ್ದಾರೆ ಹಾಗೂ ಓರ್ವ ನಾಪತ್ತೆಯಾಗಿದ್ದಾರೆ ಎಂಬುದಾಗಿ ಅಧಿಕಾರಿಗಳು ಪ್ರಕಟಿಸಿದ್ದರು.
ಗನ್ಸು ಪ್ರಾಂತದ ಬೈಯಿನ್ ನಗರದ ಸಮೀಪದ ಯೆಲ್ಲೋ ರಿವರ್ ಸ್ಟೋನ್ ಕಾಡಿನಲ್ಲಿ ಶನಿವಾರ ಮಧ್ಯಾಹ್ನ ಓಟ ಆರಂಭವಾಗಿತ್ತು. ಸ್ಪರ್ಧಿಗಳು ಅತಿ ಎತ್ತರದ ಬೆಟ್ಟ ಪ್ರದೇಶವನ್ನು ತಲುಪಿದಾಗ ಅವರು ಹವಾಮಾನ ವೈಪರೀತ್ಯವನ್ನು ಎದುರಿಸಿದರು.
ಸ್ಪರ್ಧಿಗಳು 20 ಮತ್ತು 31 ಕಿಲೋಮೀಟರ್ಗಳ ನಡುವೆ ಪ್ರಕೃತಿಯ ಭೀಕರ ದಾಳಿಗೆ ಒಳಗಾದರು ಎಂದು ಬೈಯಿನ್ ನಗರದ ಮೇಯರ್ ಝಾಂಗ್ ಕ್ಸುಚೆನ್ ಹೇಳಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ 172 ಮಂದಿಯ ಪೈಕಿ 18 ಮಂದಿಯನ್ನು ರಕ್ಷಣಾ ತಂಡವೊಂದು ರಕ್ಷಿಸಿದೆ.







